ADVERTISEMENT

ಮಂಗಳೂರು: ಸಹಬಾಳ್ವೆಯ ಅಡಿಪಾಯಕ್ಕೆ ‘ಸನಾತನ’ ಅಪಾಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:05 IST
Last Updated 12 ಸೆಪ್ಟೆಂಬರ್ 2025, 6:05 IST
ವಿಚಾರ ಸಂಕಿರಣದಲ್ಲಿ ಮದರ್ ತೆರೆಸಾ ಚಿತ್ರಕ್ಕೆ  ಪುರುಷೋತ್ತಮ ಬಿಳಿಮಲೆ, ಕೆ.ಷರೀಫಾ, ಫಾದರ್ ಅಲೋಶಿಯಸ್ ಪಾಲ್ ಡಿಸೋಜ ಹಾಗೂ ರಾಯ್ ಕ್ಯಾಸ್ಟಲಿನೊ ಪುಷ್ಪಾರ್ಚನೆ ಮಾಡಿದರು
ವಿಚಾರ ಸಂಕಿರಣದಲ್ಲಿ ಮದರ್ ತೆರೆಸಾ ಚಿತ್ರಕ್ಕೆ  ಪುರುಷೋತ್ತಮ ಬಿಳಿಮಲೆ, ಕೆ.ಷರೀಫಾ, ಫಾದರ್ ಅಲೋಶಿಯಸ್ ಪಾಲ್ ಡಿಸೋಜ ಹಾಗೂ ರಾಯ್ ಕ್ಯಾಸ್ಟಲಿನೊ ಪುಷ್ಪಾರ್ಚನೆ ಮಾಡಿದರು   

ಮಂಗಳೂರು: ಅನೇಕ ದೇಶಗಳ, ವಿವಿಧ ಸಂಸ್ಕೃತಿಗಳ ಪ್ರಭಾವ ಉಂಟಾಗಿರುವ ಭಾರತ ಸಾವಿರಾರು ವರ್ಷಗಳಿಂದ ಸಹಬಾಳ್ವೆಯ ಆಶಯದಲ್ಲೇ ಸಾಗಿ ಬಂದಿದೆ. ಆದರೆ ಈಚೆಗೆ ರಾಜಕೀಯ ಪ್ರೇರಿತ ಸನಾತನ ಸಂಸ್ಕೃತಿ ಹೇರುವ ಪ್ರಯತ್ನದಿಂದಾಗಿ ಸಮಾಜದಲ್ಲಿ ಬಿಕ್ಕಟ್ಟು ಉಂಟಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು ಮತ್ತು ಪ್ರಜಾಪ್ರಭುತ್ವದ ಮಂದಿರುವ ಸವಾಲುಗಳು ಎಂಬ ವಿಷಯದಲ್ಲಿ ಸಂತ ಮದರ್ ತೆರೆಸಾ ವಿಚಾರ ವೇದಿಕೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಸಹಬಾಳ್ವೆ ಸಂಸ್ಕೃತಿಯ ಅಂಗವೇ ಆಗಿರುವ ಭಾರತದಲ್ಲಿ ಈಗ ದ್ವೇಷ ಹರಡುವುದನ್ನೇ ಕಲಿಸಲಾಗುತ್ತಿದೆ ಎಂದರು.

ಭಾರತದ ಭೌಗೋಳಿಕ ರಾಜಕೀಯ ವ್ಯವಸ್ಥೆ ಹಲವು ಕಡೆಗಳಿಂದ ಬಹುಸಂಸ್ಕೃತಿಗಳನ್ನು ಇಲ್ಲಿಗೆ ಬರಮಾಡಿಕೊಂಡಿದೆ. ಆ ಮೂಲಕ ಅಲ್ಲಿನ ಆಹಾರ, ಕಲೆ ಮುಂತಾದವು ಇಲ್ಲಿಗೆ ಪ್ರವೇಶಿಸಿವೆ. ಹಿಂದುಗಳ ದೇವರಿಗೆ ಆಕೃತಿಯನ್ನು ಕೊಟ್ಟವರು ವಿದೇಶಿಯರು. ಬುದ್ಧನ ವಿಗ್ರಹವು ಗ್ರೀಕರ ಪರಿಕಲ್ಪನೆ. ಅದು ಆ ದೇಶದಿಂದ ಬಂದ ಶಿಲ್ಪ. ಆರ್ಯರು, ಕ್ರೈಸ್ತರು ಹಾಗೂ ಮುಸ್ಲಿಮರು ಇಲ್ಲಿಗೆ ಬಂದು ಕೊಡುಗೆ ನೀಡಿದ್ದಾರೆ. ತಾಜ್‌ಮಹಲ್‌, ಗೋಲ್‌ಗುಂಬಜ್ ಮುಂತಾದವು ಇಸ್ಲಾಂ ದೊರೆಗಳ ಕಾಣಿಕೆ. ರಾಮಾಯಣ, ಉಪನಿಷತ್ತುಗಳನ್ನು ಮುಸ್ಲಿಮರು ಅನುವಾದ ಮಾಡಿದ್ದಾರೆ. ಇಂಥ ಕೊಡುಕೊಳ್ಳುವಿಕೆಯಿಂದ ಯಾರಿಗೂ ತೊಂದರೆ ಆಗಲಿಲ್ಲ. ಯಾವ ತರಕಾರೂ ಇರಲಿಲ್ಲ. ಕೂಡಿ ಬಾಳುವ ಆಶಯವೇ ಅದಕ್ಕೆ ಕಾರಣ. 

ADVERTISEMENT

ಭಾರತದಲ್ಲಿ 4 ಸಾವಿರ ಸಮುದಾಯಗಳು ಇವೆ ಎಂದು ಹೇಳಲಾಗುತ್ತದೆ. ಡಿಎನ್‌ಎ ಅಧ್ಯಯನ ಮಾಡಿದವರು, ಇಲ್ಲಿ ಬೇಟೆಯನ್ನು ಕಲಿಸಿದ್ದು ಆಫಿಕನ್ನರು ಎಂದೂ ಕೃಷಿ ಹೇಳಿಕೊಟ್ಟವರು ಇರಾನಿಯರು ಎಂದೂ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಇಡ್ಲಿಯ ಮೂಲ ಚೀನಾದ್ದು. ಬಿರಿಯಾನಿಯ ಅಕ್ಕಿ ಮೊಘಲರು ಪರಿಚಯಿಸಿದ್ದು. ಆಹಾರವು ಸಮ್ಮಿಶ್ರ ಸಂಸ್ಕೃತಿಯ ಪ್ರತೀಕವಾಗಿದೆ. ದಕ್ಷಿಣ ಕನ್ನಡಕ್ಕೆ ವಲಸೆ ಬಂದ ಸಮೀಪದ ಜಿಲ್ಲೆಯವರು ಇಲ್ಲಿ ತಮ್ಮದೇ ದೈವಗಳನ್ನು ಮತ್ತು ಭಾಷೆಯನ್ನು ಸೃಷ್ಟಿಸಿಕೊಂಡು ಬದುಕಿದ್ದಾರೆ. ಅದಕ್ಕೆ ಯಾರ ತಕರಾರೂ ಇರಲಿಲ್ಲ. ಅಧಿಕಾರದ ಲಾಲಸೆಯಿಂದ ಶೇಕಡಾ 3 ಮಂದಿಯ ಸಂಸ್ಕೃತಿಯನ್ನು ಶೇಕಡಾ 97 ಮಂದಿಯ ಮೇಲೆ ಹೇರಲು ಪ್ರಯತ್ನಿಸುತ್ತಿರುವುದು ಬೇಸರದ ವಿಷಯ ಎಂದು ಅವರು ಹೇಳಿದರು.

ಸಂತ ಮದರ್ ತೆರೆಸಾ ವಿಚಾರ ವೇದಿಕೆ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೆ.ಷರೀಫಾ ಮಾತನಾಡಿದರು. ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಫಾದರ್ ಅಲೋಶಿಯಸ್ ಪಾಲ್ ಡಿಸೋಜ, ವಿಚಾರ ವೇದಿಕೆಯ ಗೌರವ ಸಲಹೆಗಾರ ರೂಪೇಶ್ ಮಾಡ್ತಾ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್‌, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಪ್ರಮುಖರಾದ ಮುನೀರ್ ಕಾಟಿಪಳ್ಳ, ಕೃಷ್ಣಪ್ಪ ಕೊಂಚಾಡಿ, ಕೆ.ಕರಿಯ, ಸ್ಟ್ಯಾನಿ ಲೋಬೊ, ಎರಿಕ್ ಲೋಬೊ, ಡಾಲ್ಫಿ ಡಿಸೋಜಾ, ಮಂಜುಳಾ ನಾಯಕ್, ಸಂತೋಷ್‌ ಡಿಸೋಜ ಬಜಪೆ ಪಾಲ್ಗೊಂಡಿದ್ದರು.

ವಿಚಾರ ಸಂಕಿರಣದಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಕೆ.ಷರೀಫಾ ಫಾದರ್ ಅಲೋಶಿಯಸ್ ಪಾಲ್ ಡಿಸೋಜ ಹಾಗೂ ರಾಯ್ ಕ್ಯಾಸ್ಟಲಿನೊ ಮತ್ತಿತರರು ಪಾಲ್ಗೊಂಡಿದ್ದರು.

ಜಾತಿ ವ್ಯವಸ್ಥೆಯು ಪ್ರೀತಿಯನ್ನು ಹಂಚಬೇಕು ಎಂಬ ತತ್ವವನ್ನು ಸಾರಲೇ ಇಲ್ಲ. ಅಂಥ ವ್ಯವಸ್ಥೆಯಲ್ಲಿ ಜೊತೆಯಾಗಿ ಬಾಳುವ ಮೌಲ್ಯಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಕಾರ್ಯ ಆಗಬೇಕಿದೆ.
ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

‘ಸಂಸ್ಕೃತಕ್ಕೆ ಶ್ರೇಷ್ಠ ಸ್ಥಾನ’ ಭಾಷೆಯ ವಿಷಯದಲ್ಲೂ ತಾರತಮ್ಯ ಮಾಡುವ ಯತ್ನ ನಡೆಯುತ್ತಿದೆ. 2011ರ ಗಣತಿ ಪ್ರಕಾರ 5 ಗುಂಪುಗಳ ಒಟ್ಟು 19569 ಭಾಷೆಗಳು ಭಾರತದಲ್ಲಿದ್ದು 22 ಭಾಷೆಗಳು 8ನೇ ಪರಿಚ್ಛೇಧಕ್ಕೆ ಸೇರಿಕೊಂಡಿವೆ. ಆದರೂ ಸಂಸ್ಕೃತವನ್ನು ಶ್ರೇಷ್ಠ ಎನ್ನಲಾಗುತ್ತದೆ. 2015ರಿಂದ ಕೇಂದ್ರ ಸರ್ಕಾರ ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ₹ 548 ಕೋಟಿ ವೆಚ್ಚ ಮಾಡಿದೆ. ಆದರೆ ಸಂಸ್ಕೃತ ಮಾತನಾಡುವವರ ಸಂಖ್ಯೆ 24148. ಕನ್ನಡ ಮಾತನಾಡುವವರ ಸಂಖ್ಯೆ 6.40 ಇದ್ದು ಆ ಭಾಷೆಗಾಗಿ ಕೇಂದ್ರ ವ್ಯಯಿಸಿದ್ದು ₹ 8 ಕೋಟಿ ಮಾತ್ರ. ಇಂಥ ಬೇಧವನ್ನು ಪ್ರಶ್ನಿಸಲೇಬೇಕಾಗಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.