ಮಂಗಳೂರು: ಶಕ್ತಿನಗರದಲ್ಲಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯಲ್ಲಿ ನಿರ್ಮಿಸಲಾದ ‘ಸಾನಿಧ್ಯ ಬಾಲವನ’ವನ್ನು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಎನ್.ಸಿದ್ದೇಶ್ವರ್ ಶನಿವಾರ ಉದ್ಘಾಟಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬದುಕಿನಲ್ಲಿ ಗಳಿಸುವಿಕೆ ಅನೇಕ ರೀತಿಗಳಲ್ಲಿ ನಡೆಯುತ್ತದೆ. ಆದರೆ, ‘ಸಾನಿಧ್ಯ’ದ ಶಿಕ್ಷಕ ವೃಂದ ಹಾಗೂ ಆಡಳಿತ ವರ್ಗವು ಭಿನ್ನ ಸಾಮರ್ಥ್ಯದ ಮಕ್ಕಳ ಹಾಗೂ ಅವರ ಪೋಷಕರ ಜೊತೆಗೆ ಸಮಾಜದ ಪ್ರೀತಿಯನ್ನೂ ಗಳಿಸಿದೆ. ಇಂತಹ ಗಳಿಕೆ ಯಾರಿಗಾದರೂ ಆತ್ಮ ಸಂತೃಪ್ತಿಯನ್ನು ತಂದುಕೊಡಬಲ್ಲುದು’ ಎಂದರು.
ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿದ ಸಿದ್ದೇಶ್ವರ್, ‘ವಿಶೇಷ ಮಕ್ಕಳ ಪ್ರತಿಭೆಯನ್ನು ಗುರುತಿಸಿ ತರಬೇತಿ ಕೊಡುವ ಕಾರ್ಯದಲ್ಲಿ ಸಾನಿಧ್ಯ ಮೇಲ್ಪಂಕ್ತಿ ಹಾಕಿಕೊಟ್ಟಿದೆ’ ಎಂದು ಮೆಚ್ಚುಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕ ಉಸ್ಮಾನ್, ನಿರೂಪಣಾ ಅಧಿಕಾರಿ ಕುಮಾರ್, ಶಿಶು ಕಲ್ಯಾಣ ಅಧಿಕಾರಿಗಳು, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಮನೀಶ್ ನಾಯಕ್ , ಮ್ಯಾಪ್ಸ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ದಿನೇಶ್ ಶೆಟ್ಟಿ, ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಮಹಾಬಲ ಮಾರ್ಲ, ಪದಾಧಿಕಾರಿಗಳಾದ ದೇವದತ್ತ ರಾವ್, ಜಗದೀಶ್ ಶೆಟ್ಟಿ, ಮೊಹಮ್ಮದ್ ಬಶೀರ್, ಪ್ರೊ. ರಾಧಾಕೃಷ್ಣ, ದಿವ್ಯಾ ಬಾಳಿಗ, ಉಷಾ ವಿ ಶೆಟ್ಟಿ, ವರ್ಷ ಪ್ರಕಾಶ್ ಭಾಗವಹಿಸಿದ್ದರು.
ಸಾನಿಧ್ಯ ಶಾಲೆಯ ವಿಶೇಷ ಮಕ್ಕಳು ಸ್ವಾಗತ ನೃತ್ಯ ಹಾಗೂ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನದ ಮೂಲಕ ರಂಜಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.