ADVERTISEMENT

ಬೆಳೆ ವಿಮೆ ಪರಿಹಾರ: ಅಸಮಾಧಾನ

ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಕೃಷಿ ಪತ್ತಿನ ಸಹಕಾರಿ ಮುಖಂಡರ ಸಭೆ: ಪರಿಷ್ಕಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:25 IST
Last Updated 13 ಡಿಸೆಂಬರ್ 2025, 4:25 IST
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಗಳ ಪದಾಧಿಕಾರಿಗಳು : ಪ್ರಜಾವಾಣಿ ಚಿತ್ರ
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಗಳ ಪದಾಧಿಕಾರಿಗಳು : ಪ್ರಜಾವಾಣಿ ಚಿತ್ರ   

ಮಂಗಳೂರು: ಬೆಳೆವಿಮೆಯ ಪರಿಹಾರ ವಿತರಣೆಯಲ್ಲಿ ನ್ಯೂನತೆಗಳು ಕಂಡುಬಂದಿರುವ ಕಾರಣ ಪರಿಷ್ಕರಣೆಗೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಆಗ್ರಹಿಸಿದರು.

ವಿಮೆಯ ಪರಿಹಾರ ಮೊತ್ತವನ್ನು ಸಹಕಾರಿ ಬ್ಯಾಂಕ್‌ಗಳ ಮೂಲಕ ರೈತರಿಗೆ ಪಾವತಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ರೈತರಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ತೋಟಗಾರಿಕಾ ಅಧಿಕಾರಿ ದರ್ಶನ್ ಈ ಬಗ್ಗೆ ಮಾತನಾಡಿ ಕಳೆದ ವರ್ಷ ₹ 215 ಕೋಟಿ ಮೊತ್ತದ ಪ್ರಿಮಿಯಂ ಸಂಗ್ರಹವಾಗಿದೆ. ₹270 ಕೋಟಿ ಪಾವತಿಯಾಗಿದೆ. ಈ ವರ್ಷ ₹ 277 ಕೋಟಿ ಕಂತಿನ ರೂಪದಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿಯ ವರೆಗೆ ₹169 ಕೋಟಿ ಪಾವತಿಯಾಗಿದೆ. ಬೆಳೆ ವಿಮೆ ಪಾವತಿ ಕಡಿಮೆಯಾಗಿರುವುದರಿಂದ ಪರಿಷ್ಕರಿಸುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ADVERTISEMENT

ಜಿಲ್ಲೆಯಲ್ಲಿ ಮಳೆ ಮಾಪನಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ವಿಮೆ ಪರಿಹಾರ ಮೊತ್ತ ಸರಿಯಾಗಿ ಪಾವತಿಯಾಗಿಲ್ಲ ಎಂದು ಮಹೇಶ್ ಕರಿಕ್ಕಳ ಹೇಳಿದರು. ಪಾಲಿಸಿದಾರರಿಗೆ ವೈಯಕ್ತಿಕವಾಗಿ ಬಾಂಡ್ ನೀಡಬೇಕು ಎಂದು ಪ್ರಕಾಶ್ ಚಂದ್ರ ಕಂಬದಕೋಣೆ ಆಗ್ರಹಿಸಿದರು.

ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ ರಾಜಾರಾಮ ಭಟ್, ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ ಜಯರಾಮ್ ರೈ, ಕೆ.ಜೈರಾಜ್ ಬಿ.ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಎಸ್.ಎನ್ ಮನ್ಮಥ, ಕುಶಾಲಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ‌, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ದರ್ಶನ್, ನಿಧೀಶ್, ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿ ಪ್ರಬಂಧಕ ಶುಭಂ ಪಾಲ್ಗೊಂಡಿದ್ದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೋಟ್ಟು ಸ್ವಾಗತಿಸಿದರು.

ಸಭೆಯಲ್ಲಿ ಎಂ.ಎನ್‌ ರಾಜೇಂದ್ರ ಕುಮಾರ್ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.