ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್: ಯುಪಿಐ, ಐಎಂಪಿಎಸ್ ಸೇವೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:55 IST
Last Updated 17 ಫೆಬ್ರುವರಿ 2026, 2:55 IST
ಎಂ.ಎನ್. ರಾಜೇಂದ್ರ ಕುಮಾರ್ 
ಎಂ.ಎನ್. ರಾಜೇಂದ್ರ ಕುಮಾರ್    

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್‌ಸಿಡಿಸಿಸಿ) ಗ್ರಾಹಕರಿಗೆ ಯುಪಿಐ ಮತ್ತು ಐಎಂಪಿಎಸ್‌ ನಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿದೆ. ಈ ಸೌಲಭ್ಯಗಳಿಗೆ ಫೆ. 17ರಂದು ಮಧ್ಯಾಹ್ನ 12 ಗಂಟೆಗೆ ಬ್ಯಾಂಕ್‌ನಲ್ಲಿ ಚಾಲನೆ ನೀಡಲಾಗುವುದು’ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್ ಹೇಳಿದರು. 

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈಗಾಗಲೇ ಬ್ಯಾಂಕ್ ಕೋರ್ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ಬದಲಾದ ಕಾಲದಲ್ಲಿ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್‌ನಿಂದ ಐಎಂಪಿಎಸ್ (ತ್ವರಿತ ಪಾವತಿ ಸೇವೆ) ಆರಂಭಿಸಲಾಗಿದೆ. ಇದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ತ್ವರಿತ ಹಣ ವರ್ಗಾವಣೆ ವ್ಯವಸ್ಥೆಯಾಗಿದೆ. 24X7 ಮಾದರಿಯಲ್ಲಿ, ರಜೆ ದಿನಗಳಲ್ಲೂ ಕಾರ್ಯ ನಿರ್ವಹಿಸುತ್ತದೆ’ ಎಂದರು.

ಜನವರಿ 21ರಿಂದ ಯುಪಿಐ ಸೇವೆ ಪ್ರಾರಂಭಿಸಲಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ಗ್ರಾಹಕರು ಗೂಗಲ್ ಪೇ, ಫೋನ್ ಪೇ, ಭೀಮ್, ವಾಟ್ಸ್‌ಆ್ಯಪ್ ಪೇ, ಪೇಟಿಎಂ, ಫ್ರೀಚಾರ್ಜ್, ಸೂಪರ್ ಮನಿ ಮುಂತಾದ ಅಪ್ಲಿಕೇಷನ್‌ಗಳ ಮೂಲಕ ವ್ಯವಹಾರ ನಡೆಸಬಹುದು. ಎಲ್ಲ ವ್ಯವಹಾರಗಳು ಯುಪಿಐ ಪಿನ್ ಹಾಗೂ ಎರಡು ಹಂತಗಳ ಭದ್ರತಾ ವ್ಯವಸ್ಥೆಯೊಂದಿಗೆ ಸುರಕ್ಷಿತವಾಗಿರುತ್ತವೆ. ಸಣ್ಣ ವ್ಯಾಪಾರಿಗಳು, ರೈತರು, ಅಂಗಡಿ ಮಾಲೀಕರು, ವಿದ್ಯಾರ್ಥಿಗಳು ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬಹುದು. ಇಂತಹ ವ್ಯವಸ್ಥೆ ಅಳವಡಿಸಿಕೊಂಡ ಕೆಲವೇ ಸಹಕಾರಿ ಬ್ಯಾಂಕ್‌ಗಳಲ್ಲಿ ಎಸ್‌ಸಿಡಿಸಿಸಿ ಒಂದಾಗಿದೆ ಎಂದರು. 

ADVERTISEMENT

ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ. ಜಯರಾಂ ರೈ, ಸದಾಶಿವ ಉಳ್ಳಾಲ್, ಜೈರಾಜ್ ಬಿ.ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.