ADVERTISEMENT

ಶಾಲೆಯೆಡೆಗೆ ಬಾಲರ ಬಳಗ

ನಂದನವನದಲ್ಲಿ ಚಿಣ್ಣರ ಕಲರವ, ಮಕ್ಕಳನ್ನು ಅಕ್ಕರೆಯಿಂದ ಬರಮಾಡಿಕೊಂಡ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 4:29 IST
Last Updated 1 ಜೂನ್ 2024, 4:29 IST
ಮಂಗಳೂರಿನ ಮಣ್ಣಗುಡ್ಡೆಯ ಸರ್ಕಾರಿ ಪ್ರೌಢಶಾಲೆಯಲ್ಲಿ  ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು
ಮಂಗಳೂರಿನ ಮಣ್ಣಗುಡ್ಡೆಯ ಸರ್ಕಾರಿ ಪ್ರೌಢಶಾಲೆಯಲ್ಲಿ  ಶಿಕ್ಷಕರು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು   

ಮಂಗಳೂರು: ಎರಡು ತಿಂಗಳುಗಳಿಂದ ನಿಶಃಬ್ದವಾಗಿದ್ದ ಶಾಲೆಯ ಆವರಣದಲ್ಲಿ ಶುಕ್ರವಾರ ಲವಲವಿಕೆಯ ವಾತಾವರಣ. ಶಿಕ್ಷಕರ ಕಂಗಳಲ್ಲಿ ಹೊಸ ಹೊಳಪು, ಮೊದಲ ದಿನ ಶಾಲೆಗೆ ಬಂದ ಮಕ್ಕಳನ್ನು ಅಕ್ಕರೆಯಿಂದ ಬರಮಾಡಿಕೊಳ್ಳುವ ಕಾತರ. ಅಡುಗೆ ಕೋಣೆಯಿಂದ ಸೂಸುವ ಸಾಂಬಾರಿನ ಘಮ, ಪಾಯಸದ ಸುವಾಸನೆ...

ಶಾಲಾ ಪ್ರಾರಂಭೋತ್ಸವದಲ್ಲಿ ಕಂಡ ಸಂಭ್ರಮದ ಪರಿ ಇದು. ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು, ಮಾವಿನ ತೋರಣ ಕಟ್ಟಿ ಶೃಂಗರಿಸಿದ್ದರು. ಶಾಲೆಗೆ ಬಂದ ಪುಟಾಣಿಗಳ ಮೇಲೆ ಶಿಕ್ಷಕರು ಪುಷ್ಪವೃಷ್ಟಿ ಮಾಡಿದರು, ಗುಲಾಬಿ ಹೂ, ಬಲೂನು ನೀಡಿ ಸ್ವಾಗತಿಸಿದರು.

ಜಿಲ್ಲೆಯಾದ್ಯಂತ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು. ಚುನಾವಣಾ ನೀತೆ ಸಂಹಿತೆ ಜಾರಿಯಲ್ಲಿ ಇರುವುದರಿಂದ ಶಾಲೆ ಆವರಣದಲ್ಲೇ ಜಾಥಾ ನಡೆಸಲಾಯಿತು, ಸರಳ ಸಭಾ ಕಾರ್ಯಕ್ರಮ ನಡೆಸಿ, ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು.

ADVERTISEMENT

ಮಧ್ಯಾಹ್ನದ ಬಿಸಿಯೂಟಕ್ಕೆ ಅನ್ನ, ಸಾಂಬಾರು ಜೊತೆಗೆ ಪಾಯಸ, ಲಾಡು, ಬರ್ಫಿ ಇನ್ನಿತರ ಸಿಹಿಯನ್ನು ಮಕ್ಕಳಿಗೆ ನೀಡಲಾಯಿತು. ಶಕ್ತಿನಗರದ ನಾಲ್ಯಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪೆನ್ನು ಮತ್ತು ಒಂದು ಪ್ಯಾಕ್ ಬಿಸ್ಕತ್ ನೀಡಿ ಶಿಕ್ಷಕರು ಸ್ವಾಗತಿಸಿದರು. ‘15 ದಿನ ಮುಂಚಿತವಾಗಿ ಶಾಲೆಗೆ ಬಣ್ಣ ಬಳಿದು, ಗೋಡೆಯ ಮೇಲೆ ಬುದ್ಧನ ಚಿತ್ರ, ವರ್ಲಿ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು’ ಎಂದು ಮುಖ್ಯ ಶಿಕ್ಷಕಿ ಶರ್ಮಿಳಾ ತಿಳಿಸಿದರು.

ನಗರದ ಮಣ್ಣಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಪುಸ್ತಕ ತೇರಿನೊಂದಿಗೆ ಕಿರಿಯ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡರು. ಶಾಲೆಯನ್ನು ತೋರಣ, ಬಲೂನಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಜಿಲ್ಲೆಯ ಬಾಳ್ತಿಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ಸಮವಸ್ತ್ರ ವಿತರಿಸಲಾಯಿತು. ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆ, ಹೊಸಮಜಲು ಹಿರಿಯ ಪ್ರಾಥಮಿಕ ಶಾಲೆ, ಕುಂತೂರು ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ, ಸಿಹಿ ನೀಡಿ, ಮಕ್ಕಳನ್ನು ಪ್ರೀತಿಯಿಂದ ತರಗತಿಯ ಕೊಠಡಿಗೆ ಕರೆದೊಯ್ಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.