ADVERTISEMENT

ಮುಖಗವಸು ಧರಿಸಿ ಮರಳಿ ಶಾಲೆಗೆ

ದಕ್ಷಿಣ ಕನ್ನಡ: ಪಾಲಕರು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 4:01 IST
Last Updated 2 ಜನವರಿ 2021, 4:01 IST
ರಥಬೀದಿಯ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಭ್ರಮ.
ರಥಬೀದಿಯ ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಭ್ರಮ.   

ಮಂಗಳೂರು: ಶಾಲೆಗಳ ಆರಂಭಕ್ಕೆ ಉತ್ಸುಕರಾಗಿದ್ದ ಪಾಲಕರು ಮಕ್ಕಳನ್ನು ಸಿದ್ಧ ಮಾಡಿ, ಮುಖಕ್ಕೆ ಮಾಸ್ಕ್‌ ಹಾಕಿ, ಒಂದಿಷ್ಟು ಕಿವಿಮಾತು ಹೇಳಿ ಶಾಲೆಗೆ ಕಳುಹಿಸುವಲ್ಲಿ ನಿರತರಾಗಿದ್ದರು. ತುದಿಗಾಲಲ್ಲಿ ನಿಂತತಿದ್ದ ಮಕ್ಕಳೂ ಸಮವಸ್ತ್ರ ಧರಿಸಿ, ಶಾಲೆಗಳತ್ತ ಹೆಜ್ಜೆ ಹಾಕಿದರು. ಬಹುದಿನಗಳ ನಂತರ ಸ್ನೇಹಿತರನ್ನು ನೋಡಿದ ಸಂಭ್ರಮ ಒಂದೆಡೆಯಾದರೆ, ಶಾಲೆಯ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ಸಂತೋಷ ಇನ್ನೊಂದೆಡೆ.

ಕೋವಿಡ್‌–19 ಆತಂಕದಿಂದ 9 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಶಾಲೆ-ಕಾಲೇಜುಗಳು ಹೊಸ ವರ್ಷದ ಮೊದಲ ದಿನವಾದ ಶುಕ್ರವಾರ ಬಾಗಿಲು ತೆರೆದಿದ್ದು, ಈ ಸಂದರ್ಭದಲ್ಲಿ ಮಕ್ಕಳು, ಪಾಲಕರ ಉತ್ಸಾಹದ ಪರಿ ಇದು.

ಆರಂಭದ ದಿನವೇ ಶೈಕ್ಷಣಿಕ ಚಟುವಟಿಕೆಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ತರಗತಿ ವಿದ್ಯಾರ್ಥಿಗಳು ಮತ್ತು ವಿದ್ಯಾಗಮದಡಿ 6 ರಿಂದ 9ನೇ ತರಗತಿಗೆ ವಿದ್ಯಾರ್ಥಿಗಳು ತರಗತಿಗೆ ಹಾಜರಾದರು.

ADVERTISEMENT

ಕೋವಿಡ್‌ ಭಯದಿಂದ ಮಾರ್ಚ್ 24ರ ಬಳಿಕ ಲಾಕ್‌ಡೌನ್ ಘೋಷಣೆಯಾಗಿದ್ದು, ನಂತರ ಶೈಕ್ಷಣಿಕ ಚಟುವಟಿಕೆಗಳೆಲ್ಲ ಸಂಪೂರ್ಣವಾಗಿ ನಿಂತಿದ್ದವು. ಆನ್‌ಲೈನ್ ಪಾಠ, ಮೊದಲ ಹಂತ ವಿದ್ಯಾಗಮದಡಿ ಶಿಕ್ಷಕರೇ ಮಕ್ಕಳ ಬಳಿಗೆ ಬಂದು ಪಾಠ ಮಾಡಿದ್ದರು. ಆದರೆ, ಶಿಕ್ಷಕರಿಗೆ ಕೋವಿಡ್–19 ಬಾಧಿಸಿದ್ದ ಘಟನೆಗಳಿಂದಾಗಿ ವಿದ್ಯಾಗಮವೂ ಸ್ಥಗಿತವಾಗಿತ್ತು.

ಶೃಂಗರಿಸಿದ ಶಾಲೆಗಳು: 9 ತಿಂಗಳ ಬಳಿಕ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಗುರುವಾರವೇ ಶಿಕ್ಷಕರು ಶಾಲೆಗೆ ಬಂದು, ಶಾಲೆಗಳನ್ನು ಅಲಂಕರಿಸಿದ್ದರು. ಬಹುತೇಕ ಶಾಲೆಗಳಲ್ಲಿ ಪ್ರಾರಂಭೋತ್ಸವವನ್ನೂ ಹಮ್ಮಿಕೊಳ್ಳಲಾಗಿತ್ತು.

6 ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ದಿನ ಬಿಟ್ಟು ದಿನ ತರಗತಿಗಳು ನಡೆಯಲಿವೆ. ಯಾವ ತರಗತಿಗೆ ಯಾವ ದಿನ ಶಾಲೆ ನಡೆಸಬೇಕೆಂಬ ತೀರ್ಮಾನವನ್ನು ಶಾಲೆಗಳ ಮುಖ್ಯಸ್ಥರಿಗೆ ವಹಿಸಲಾಗಿದೆ.

ಸುದೀರ್ಘ ರಜೆ ಕಳೆದು ಶಾಲೆ, ಕಾಲೇಜಿಗೆ ಬಂದ ವಿದ್ಯಾರ್ಥಿಗಳು, ಶಿಸ್ತಿನಿಂದಲೇ ತರಗತಿಗಳಲ್ಲಿ ಕುಳಿತುಕೊಂಡರು. ಸುರಕ್ಷಿತ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವುದನ್ನೂ ಮರೆಯಲಿಲ್ಲ. ಸುದೀರ್ಘ ರಜೆಯ ಬಳಿಕ ತಮ್ಮ ಶಿಕ್ಷಕರು, ಸಹಪಾಠಿಗಳನ್ನು ನೋಡಿದ ಸಂಭ್ರಮ ಮಕ್ಕಳ ಮುಖದಲ್ಲಿತ್ತು.

ಪಿಯುಸಿ: ಶೇ 70 ರಷ್ಟು ವಿದ್ಯಾರ್ಥಿಗಳು

ವರ್ಷದ ಮೊದಲ ದಿನವೇ ಪದವಿಪೂರ್ವ ಕಾಲೇಜು ಆರಂಭಕ್ಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ತೋರಿದರು.

ಜಿಲ್ಲೆಯಲ್ಲಿ ಕಲಾ ವಿಭಾಗದ 1,967, ವಾಣಿಜ್ಯ ವಿಭಾಗದ 6,694 ಹಾಗೂ ವಿಜ್ಞಾನ ವಿಭಾಗದ 5,838 ವಿದ್ಯಾರ್ಥಿಗಳು ಹಾಜರಾಗುವ ಮೂಲಕ ಶೇ 70ರಷ್ಟು ಹಾಜರಾತಿ ದಾಖಲಾಗಿದೆ. ಹಾಸ್ಟೆಲ್‌ನಲ್ಲಿರುವ 2,781 ಹಾಗೂ ಕೇರಳದಿಂದ 257 ವಿದ್ಯಾರ್ಥಿಗಳು ಮೊದಲ ದಿನ ತರಗತಿಯಲ್ಲಿ ಪಾಠ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.