ADVERTISEMENT

‘ವಿಜ್ಞಾನಕ್ಕೆ ನೈತಿಕ ಬಲವೂ ಮುಖ್ಯ’

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಗಿರೀಶ್ ಭಾರದ್ವಾಜ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:01 IST
Last Updated 1 ಮಾರ್ಚ್ 2023, 5:01 IST
ಕಾರ್ಯಕ್ರಮದಲ್ಲಿ ಡಾ.ಗಿರೀಶ್‌ ಭಾರದ್ವಾಜ್‌ ಅವರನ್ನು ಸನ್ಮಾನಿಸಲಾಯಿತು. ಹರ್ಷಿತ್ ಬಿ., ಡಾ.ನಾರಾಯಣ ಭಟ್, ಡಾ. ಪ್ರವೀಣ್ ಮಾರ್ಟಿಸ್, ಹರ್ಷ ಪೌಲ್, ಇಯಾನ್ ಕ್ಯಾಸ್ಟೆಲಿನೊ ಇದ್ದಾರೆ
ಕಾರ್ಯಕ್ರಮದಲ್ಲಿ ಡಾ.ಗಿರೀಶ್‌ ಭಾರದ್ವಾಜ್‌ ಅವರನ್ನು ಸನ್ಮಾನಿಸಲಾಯಿತು. ಹರ್ಷಿತ್ ಬಿ., ಡಾ.ನಾರಾಯಣ ಭಟ್, ಡಾ. ಪ್ರವೀಣ್ ಮಾರ್ಟಿಸ್, ಹರ್ಷ ಪೌಲ್, ಇಯಾನ್ ಕ್ಯಾಸ್ಟೆಲಿನೊ ಇದ್ದಾರೆ   

ಮಂಗಳೂರು: ‘ವಿಜ್ಞಾನಕ್ಕೆ ನೈತಿಕ ಬಲವೂ ಮುಖ್ಯ. ಕಾಲೇಜುಗಳಲ್ಲಿ ವಿಜ್ಞಾನದ ವಿಷಯಗಳ ಜೊತೆಗೆ ನೈತಿಕ ವಿಜ್ಞಾನವನ್ನೂ ಕಲಿಸಬೇಕು’ ಎಂದು ‘ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ’ ಎಂದೇ ಹೆಸರುವಾಸಿಯಾಗಿರುವ ತೂಗುಸೇತುವೆ ತಜ್ಞ ಡಾ.ಗಿರೀಶ್ ಭಾರದ್ವಾಜ್ ಹೇಳಿದರು.

‘ರಾಷ್ಟ್ರೀಯ ವಿಜ್ಞಾನ ದಿನ’ದ ಅಂಗವಾಗಿ ನಗರದ ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದರು.‌

‘ಗ್ರಾಮೀಣ ಪ್ರದೇಶಗಳಲ್ಲಿ ನದಿಗಳಿಗೆ ಸೇತುವೆ ಇಲ್ಲದ ಕಾರಣ ಜನರು ಸಮಸ್ಯೆ ಎದುರಿಸುತ್ತಿರುವುದು ನನ್ನನ್ನು ಕಾಡುತ್ತಿತ್ತು. ಅವರಿಗಾಗಿ ಏನಾದರೂ ಮಾಡಬೇಕೆಂಬ ತುಡಿತವಿತ್ತು. ಕಡಿಮೆ ಖರ್ಚಿನಲ್ಲಿ, ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆ ಬರುವ ತೂಗುಸೇತುವೆ ನಿರ್ಮಿಸುವ ಮಾದರಿಯನ್ನು ರೂಪಿಸಿದೆ. ತಂದೆಯವರ ಸಲಹೆ ಮೇರೆಗೆ ಇದಕ್ಕಾಗಿ ಕಾರ್ಯಾಗಾರವನ್ನು ಸ್ಥಾಪಿಸಿದೆ’ ಎಂದು ಅವರು ಜೀವನಾನುಭವ ಹಂಚಿಕೊಂಡರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್, ‘ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ವೃತ್ತಿಯಲ್ಲಿ ಏನಾದರೂ ಹೊಸತನ್ನು ಸಾಧಿಸಬೇಕು’ ಎಂದರು.

ಡಾಕ್ಟರೇಟ್ ಪದವಿ ಪಡೆದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿಜ್ಞಾನ ವಿಭಾಗದ ನಿರ್ದೇಶಕ ಡಾ.ನಾರಾಯಣ ಭಟ್ ಅತಿಥಿಗಳನ್ನು ಪರಿಚಯಿಸಿದರು. ಹರ್ಷಿತ್ ಬಿ. ಅವರು ಸ್ವಾಗತಿಸಿದರು. ಬಿ.ಎಸ್ಸಿ ವಿದ್ಯಾರ್ಥಿನಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಜೈವಿಕ ವಿಜ್ಞಾನ ವಿಭಾಗದ ಡೀನ್ ಹರ್ಷ ಪೌಲ್ ವಂದಿಸಿದರು. ವಿದ್ಯಾರ್ಥಿ ಸಂಯೋಜಕ ಇಯಾನ್ ಕ್ಯಾಸ್ಟಲಿನೊ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.