ADVERTISEMENT

ಯುವಕನ ಬಲಿ ಪಡೆದ ಹೆದ್ದಾರಿ ಹೊಂಡ

ಗುಂಡಿ ತಪ್ಪಿಸುವ ಭರದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಕೂಟರ್‌

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:52 IST
Last Updated 7 ಆಗಸ್ಟ್ 2022, 7:52 IST

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿರುವ ಹೊಂಡ ಯುವಕನೊಬ್ಬನ ಬಲಿ ಪಡೆದಿದೆ. ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಹೆದ್ದಾರಿಯ ವಿಭಜಕಕ್ಕೆ ಸ್ಕೂಟರ್‌ ಡಿಕ್ಕಿ ಹೊಡೆದು ಸವಾರ ಅಸುನೀಗಿದ್ದಾರೆ.

ಮೃತ ಯುವಕನನ್ನು ಮಾಲೇಮಾರ್‌ ಯತೀಶ್‌ ಅವರ ಪುತ್ರ ಆತಿಶ್‌ (20) ಎಂದು ಗುರುತಿಸಲಾಗಿದೆ. ಆತಿಶ್‌ ಅವರು ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸ್ಕೂಟರ್‌ನಲ್ಲಿ ಶುಕ್ರವಾರ ಸಂಜೆ ಸಾಗುತ್ತಿದ್ದರು. ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್‌ಗಿಂತ ಸ್ವಲ್ಪ ಮೊದಲು ಸಿಗುವ ‘ಮರಿಯನ್ ಪ್ಯಾರಡೈಸ್ ಅವೆನ್ಯೂ’ ವಾಣಿಜ್ಯ ಕಟ್ಟಡದ ಎದುರು ಸಾಗುವಾಗ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್‌ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಮಳೆ ಬರುತ್ತಿದ್ದುದರಿಂದ ಹೆದ್ದಾರಿಯಲ್ಲಿ ಹೊಂಡ ಇದ್ದುದು ಸವಾರನ ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಕೂಟರ್‌ ರಸ್ತೆ ವಿಭಜಕಕ್ಕೆ ಉಜ್ಜಿಕೊಂಡು ಸುಮಾರು 50 ಮೀ. ದೂರವರೆಗೆ ಸಾಗಿತ್ತು. ರಸ್ತೆ ವಿಭಜಕದ ಮೇಲೆ ಆತಿಶ್‌ ಬಿದ್ದಿದ್ದರು. ರಸ್ತೆ ವಿಭಜಕದಲ್ಲಿ ಅಳವಡಿಸಿದ್ದ ಬೆಳಕು ಪ್ರತಿಫಲಿಸುವ ಕಂಬಕ್ಕೆ ಅವರ ತಲೆ ಬಡಿದಿತ್ತು. ತಲೆಯ ಬಲಬದಿ ಹಾಗೂ ಬಲ ಕಿವಿಯ ಹಿಂಭಾಗಗಳಲ್ಲಿ ಗಂಭೀರ ಗಾಯಗಳಾಗಿದ್ದವು. ಸ್ಥಳದಲ್ಲಿದ್ದವರು ತಕ್ಷಣವೇ ಕಾರೊಂದರಲ್ಲಿ ಗಾಯಾಳುವನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದಾರಿ ಮಧ್ಯೆಯೇ ಆತಿಶ್‌ ಕೊನೆಯುಸಿರೆಳೆದಿದ್ದರು. ಅವರ ಗೆಳೆಯ ಕಾರ್ತಿಕ್ ನೀಡಿದ ದೂರಿನ ಮೇರೆಗೆಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಆತಿಶ್‌ ಅವರು ನಿತ್ಯ ಸಂಜೆ ಜಿಮ್‌ಗೆ ಹೋಗಿ ದೈಹಿಕ ಕಸರತ್ತು ನಡೆಸುತ್ತಿದ್ದರು. ಶುಕ್ರವಾರ ಅವರು ಜಿಮ್‌ಗೆ ತೆರಳಿರಲಿಲ್ಲ. ಹಾಗಾಗಿ ಅವರಿಗೆ ಗೆಳೆಯ ಕಾರ್ತಿಕ್‌ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಎ.ಜೆ ಆಸ್ಪತ್ರೆಯ ಸಿಬ್ಬಂದಿ ಆತಿಶ್‌ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದರು.

ಹೆದ್ದಾರಿಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದರೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವುಗಳನ್ನು ಮುಚ್ಚುವುದಕ್ಕೆ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.