ADVERTISEMENT

ಅಶೋಕ್ ರೈ ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ: ನೂರುದ್ದೀನ್ ಸಾಲ್ಮರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:50 IST
Last Updated 27 ಅಕ್ಟೋಬರ್ 2025, 5:50 IST
<div class="paragraphs"><p>ಅಶೋಕ್ ರೈ</p></div>

ಅಶೋಕ್ ರೈ

   

ಪುತ್ತೂರು: ‘ಅಕ್ರಮವಾಗಿ ಗೋ ಸಾಗಾಟ ಮಾಡಿದ ಆರೋಪಿಯ ವಿರುದ್ಧ ಪೊಲೀಸರು ಕಾನೂನುಕ್ರಮ ಕೈಗೊಂಡಿದ್ದು, ಈ ಬಗ್ಗೆ ಹೇಳಿಕೆ ನೀಡಿರುವ ಪುತ್ತೂರು ಶಾಸಕರ ವಿರುದ್ಧ ಮುಸ್ಲಿಮರನ್ನು ಧರ್ಮಾತೀತವಾಗಿ ಎತ್ತಿಕಟ್ಟುವ ಪ್ರಯತ್ನವನ್ನು ಎಸ್‌ಡಿಪಿಐ ಮಾಡುತ್ತಿದೆ. ಈ ಪ್ರಯತ್ನಕ್ಕೆ ಮುಸ್ಲಿಂ ಸಮುದಾಯ ಕಿವಿ ಕೊಡುವುದಿಲ್ಲ. ಇದೊಂದು ವಿಫಲ ಯತ್ನ’ ಎಂದು ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ ಹೇಳಿದರು.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕರು ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಎಸ್‌ಡಿಪಿಐ ಸುಳ್ಳು ಪ್ರಚಾರ ಮಾಡುತ್ತಿದೆ. ಅಕ್ರಮ ಗೋ ಸಾಗಾಟದ ಆರೋಪಿಯ ಕಾಲಿಗೆ ಈಗ ಗುಂಡು ಹಾರಿಸಿದ್ದಾರೆ. ಮುಂದೆ ಬೇರೆ ಭಾಗಕ್ಕೂ ಹಾರಿಸುತ್ತಾರೆ ಎಂದು ಶಾಸಕರು ಹೇಳಿರುವುದರಲ್ಲಿ ತಪ್ಪಿಲ್ಲ. ಅಕ್ರಮ ಚಟುವಟಿಕೆ ಮಾಡುವವರ ಬಗ್ಗೆ ಶಾಸಕರು ಈ ರೀತಿಯಾಗಿ ಹೇಳಿದ್ದಾರೆಯೇ ಹೊರತು ಅಲ್ಪ ಸಂಖ್ಯಾತರ ಬಗ್ಗೆ ಅಲ್ಲ. ರಾಜಕೀಯಕ್ಕಾಗಿ ಎಸ್‌ಡಿಪಿಐ ಇಂಥ ಹೇಳಿಕೆ ನೀಡುತ್ತಿದೆ. ಮುಸ್ಲಿ ಸಮುದಾಯ ಈ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಹಲವು ಪ್ರಕರಣ ಹಾಕಿಸಿಕೊಂಡವರು ಆ ಸ್ಥಳಕ್ಕೆ ಹೋಗಿ ಗೋರಕ್ಷಕರಂತೆ ಕಾಣಿಸಿಕೊಂಡಿರುವುದು ಕೊಟ್ಟಿರುವುದು ಖಂಡನೀಯ. ಅವರದ್ದೇ ಸರ್ಕಾರ ಇದ್ದಾಗ ಇಂಥ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಹೇಳಿದ್ದಾರೆ. ಜಾನುವಾರುಗಳನ್ನು ಕದ್ದು ಸಾಗಾಟ ಮಾಡುವುದನ್ನು ಇಸ್ಲಾಂ ಒಪ್ಪುವುದಿಲ್ಲ. ಅಪರಾಧಿಯನ್ನು ಆತನ ಧರ್ಮದ ಆಧಾರದಲ್ಲಿ ನೋಡಬಾರದು. ವ್ಯಕ್ತಿ ಮಾಡಿದ ತಪ್ಪಿನಿಂದ ಧರ್ಮಕ್ಕೆ ಕೆಟ್ಟ ಹೆಸರು ಬರಬಾರದು ಎಂದು ಶಾಸಕರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.

‘ಅಶೋಕ್ ರೈ ಎಲ್ಲ ಧರ್ಮದವರನ್ನು ಪ್ರೀತಿಸುತ್ತಾರೆ. ನೆರವು ನೀಡುತ್ತಿದ್ದಾರೆ. ಅವರು ಬಿಜೆಪಿಯಲ್ಲಿದ್ದಾಗಲೂ ಸರ್ವಧರ್ಮಗಳನ್ನು ಗೌರವಿಸುತ್ತಿದ್ದರು. ಆಗಲೂ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿಲ್ಲ’ ಎಂದರು.

ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ.‌ತೌಸೀಫ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಶಬೀರ್ ಕೆಂಪಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.