ಉಳ್ಳಾಲ: ಇಲ್ಲಿನ ಕೋಟೆಪುರದಿಂದ- ಉಚ್ಚಿಲ ಬಟ್ಟಪ್ಪಾಡಿ ವರೆಗಿನ ಕಡಲ್ಕೊರೆತ ಪೀಡಿತ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು ಅಲ್ಲಿ ತಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ಕಡಲ್ಕೊರೆತದಿಂದ ಮನೆ, ರಸ್ತೆಗೆ ಹಾನಿಯಾಗಲು ಬಿಡುವುದಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಉಳ್ಳಾಲದ ಕಡಲ್ಕೊರೆತ ಪೀಡಿತ ಪ್ರದೇಶಗಳಾದ ಕೋಟೆಪುರ, ಮೊಗವೀರ ಪಟ್ಣ, ಸೀಗ್ರೌಂಡ್, ನ್ಯೂ ಉಚ್ಚಿಲ, ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಗಳಿಗೆ ಅಧಿಕಾರಿಗಳ ಜತೆ ಸೋಮವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು.
ಉಳ್ಳಾಲ ಕೋಟೆಪುರದಿಂದ ಬಟ್ಟಪ್ಪಾಡಿ ವರೆಗಿನ ಕಡಲ್ಕೊರೆತ ತೀವ್ರತೆಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಎಡಿಬಿ ಯೋಜನೆ ಮೂಲಕ ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿ ನಡೆದ ಕಾರಣ ಮನೆಗಳಿಗೆ ಹಾನಿ ಉಂಟಾಗುವುದು ಬಹುತೇಕ ಕಡಿಮೆ ಆಗಿದೆ. ಬಟ್ಟಪ್ಪಾಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ರಸ್ತೆ ಸಂಪರ್ಕ ಕಡಿತ ಆದ ನಂತರ ಆ ಪ್ರದೇಶದಲ್ಲಿ ಕಡಲ್ಕೊರೆತ ತಡೆಯ ಶಾಶ್ವತ ಕಾಮಗಾರಿ ಆಗಿಲ್ಲ. ಬಟ್ಟಪ್ಪಾಡಿ ಪ್ರದೇಶದ ಮನೆಗಳ ರಕ್ಷಣೆಗಾಗಿ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು. ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿದರೂ ಪ್ರತಿ ವರ್ಷ ಅದರ ಸಮರ್ಪಕ ನಿರ್ವಹಣೆ ಅಗತ್ಯ ಎಂದರು.
ಎಡಿಬಿ ಯೋಜನೆಯಿಂದ ನಡೆದ ಬ್ರೇಕ್ ವಾಟರ್ ಕಾಮಗಾರಿಯ ಸಮರ್ಪಕ ನಿರ್ವಹಣೆ ಆಗಿಲ್ಲ. ಮತ್ತೆ ಅದನ್ನು ಸುಸ್ಥಿರ ಮಾಡಲು ನಿರ್ವಹಣೆಯ ಖರ್ಚಿನ ಅಂದಾಜು ಪಟ್ಟಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅದಕ್ಕೆ ಅನುಗುಣವಾಗಿ ಮುಂದಿನ ವರ್ಷ ನಿರ್ವಹಣೆಯು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಖಾಸಗಿ ಜಾಗಕ್ಕೆ ಕಲ್ಲು ಹಾಕಲು ನಿಯಮ ಜಾರಿ: ಕೆಲವರು ಸಮುದ್ರ ತೀರದಲ್ಲಿರುವ ಖಾಸಗಿ ಜಾಗದ ಮುಂದೆ ಅಲೆಗಳನ್ನ ನಿಯಂತ್ರಿಸಲು ಕಲ್ಲುಗಳನ್ನ ಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಜಾಗ ಬಿಟ್ಟು, ಭವಿಷ್ಯದ ಕಾಮಗಾರಿಗೆ ತೊಂದರೆ ಕೊಡದಂತೆ ಖಾಸಗಿಯವರು ಅಧಿಕಾರಿಗಳಿಂದ ಒಪ್ಪಿಗೆ ತೆಗೆದೇ ಸಮುದ್ರ ತೀರಕ್ಕೆ ಕಲ್ಲುಗಳನ್ನು ಹಾಕುವ ಕಾಮಗಾರಿ ನಡೆಸಬೇಕೆಂಬ ನಿಯಮ ಮಾಡಿರುವುದಾಗಿ ಹೇಳಿದರು.
ನ್ಯೂ ಉಚ್ಚಿಲದ ವಾಸ್ಕೊ ರೆಸಾರ್ಟ್ ಮುಂದೆ ಕಡಲು ಪ್ರಕ್ಷುಬ್ದಗೊಂಡಿದ್ದು, ಉಚ್ಚಿಲ-ಸೋಮೇಶ್ವರ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪ್ರದೇಶದ ಕಡಲ ತೀರದಲ್ಲಿರುವ ಯೋಗೀಶ್ ಎಂಬುವರ ಮನೆ ಕೊಚ್ಚಿ ಹೋಗುವ ಹಂತದಲ್ಲಿದೆ. ನ್ಯೂ ಉಚ್ಚಿಲಕ್ಕೆ ಭೇಟಿ ನೀಡಿದ ಖಾದರ್ ಅವರು ಯೋಗೀಶ್ ಅವರನ್ನ ಭೇಟಿ ನೀಡಿ ಧೈರ್ಯ ತುಂಬಿದರು.
ಮಂಗಳೂರು ಸಹಾಯಕ ಕಮಿಷನರ್ ಹರ್ಷವರ್ಧನ್, ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಬಂದರು ಇಲಾಖೆ ಅಧಿಕಾರಿ ರಾಜೇಶ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಸದಸ್ಯರಾದ ರವಿಶಂಕರ್ ಸೋಮೇಶ್ವರ, ಮುಖಂಡರಾದ ರಮೇಶ್ ಶೆಟ್ಟಿ ಬೋಳಿಯಾರು, ಸುರೇಶ್ ಭಟ್ನಗರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.