ಮಂಗಳೂರು: ಉಳ್ಳಾಲದ ಕೋಟೆಪುರದಿಂದ ತಲಪಾಡಿವರೆಗೆ ಸೀ–ಫ್ರಂಟ್ ರಸ್ತೆ ಅಭಿವೃದ್ಧಿ ಯೋಜನೆಯ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕೆ ಅಂದಾಜು ₹ 1 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಲ್ಲಾಪು– ಹರೇಕಳ –ಪಾವೂರುವರೆಗೆ ರಿವರ್ ಫ್ರಂಟ್ ರಸ್ತೆ ನಿರ್ಮಿಸಲಾಗುತ್ತಿದೆ. ಸುಮಾರು ₹ 160 ಕೋಟಿ ಮೊತ್ತದ ಯೋಜನೆ ಇದು. ಇದರಲ್ಲಿ ₹ 20 ಕೋಟಿ ಮೊತ್ತದ ಕಾಮಗಾರಿ ಈಗಾಗಲೇ ಶುರುವಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದರು.
‘ತುಂಬೆ ಹಾಗೂ ಅಡ್ಯಾರ್ ಅಣೆಕಟ್ಟೆ ಜಲಾಶಯ ಪಕ್ಕದ ಗ್ರಾಮಗಳಲ್ಲಿ ಮುಳುಗಡೆಯಾಗುವ ಜಮೀನುಗಳಿಗೆ ₹ 180 ಕೋಟಿ ಪರಿಹಾರ ನೀಡಬೇಕಾಗುತ್ತಿತ್ತು. ಅದನ್ನು ತಪ್ಪಿಸಲು ರಿವರ್ ಫ್ರಂಟ್ ಯೋಜನೆ ರೂಪಿಸಲಾಗಿದೆ. ಭೂ ಪರಿಹಾರ ನೀಡಲು ಬೇಕಾದಕ್ಕಿಂತ ಕಡಮೆ ಖರ್ಚಿನಲ್ಲಿ ರಸ್ತೆ ಸೌಕರ್ಯ ನಿರ್ಮಾಣ ಮಾಡಬಹುದು. ಭೂಮಿ ಮುಳುಗಡೆಯಾಗಬೇಕಿದ್ದ ಭೂಮಿಯನ್ನೂ ಉಳಿಸಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.