ADVERTISEMENT

PU Result: ದಕ್ಷಿಣ ಕನ್ನಡಕ್ಕೆ ಪ್ರಥಮ ರ್‍ಯಾಂಕ್ ಗರಿ

ರಾಜ್ಯದಲ್ಲಿ ದ್ವಿತೀಯ ಸ್ಥಾನ, ಶೇಕಡಾವಾರು ಫಲಿತಾಂಶ ಇಳಿಕೆ, ವಿದ್ಯಾರ್ಥಿನಿಯರ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:34 IST
Last Updated 8 ಏಪ್ರಿಲ್ 2025, 13:34 IST
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಅಮೂಲ್ಯ ಕಾಮತ್ ಮತ್ತು ದೀಪಶ್ರೀ ಎಸ್ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿದರು
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಅಮೂಲ್ಯ ಕಾಮತ್ ಮತ್ತು ದೀಪಶ್ರೀ ಎಸ್ ಅವರನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿದರು   

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ ಪ್ರಥಮ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ದ್ವಿತೀಯ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ 93.57ರಷ್ಟು ದಾಖಲಾಗಿದೆ.

ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ವಿಜ್ಞಾನ ವಿಭಾಗದಲ್ಲಿ (600ಕ್ಕೆ 599 ಅಂಕ) ರಾಜ್ಯಕ್ಕೆ ಪ್ರಥಮ ರ್‍ಯಾಂಕ್, ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಎಸ್ (600ಕ್ಕೆ 599 ಅಂಕ) ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

21-22ನೇ ಸಾಲಿನಿಂದ ಸತತವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ‌ ಸ್ಥಾನ ಕಾಯ್ದುಕೊಂಡಿತ್ತು. 2021-22ನೇ ಸಾಲಿನಲ್ಲಿ ಶೇ 88.02 ಫಲಿತಾಂಶ, 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 95.33 ಫಲಿತಾಂಶ, 2023–34ರಲ್ಲಿ ಶೇ 97.37 ಫಲಿತಾಂಶ ದಾಖಲಾಗಿತ್ತು. ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿ ಇಳಿಕೆಯಾಗಿದೆ.

ADVERTISEMENT

ಪರೀಕ್ಷೆಗೆ ಹಾಜರಾಗಿದ್ದ 34,186 ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 31,989 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತೇರ್ಗಡೆಯಾದವರಲ್ಲಿ 15,852 ಬಾಲಕರು, 17,051 ಬಾಲಕಿಯರು. ಬಾಲಕರ ಒಟ್ಟು ಫಲಿತಾಂಶ ಶೇ 88.8 ಆಗಿದ್ದರೆ, ಬಾಲಕಿಯರ ಸಾಧನೆ ಶೇ 93.73ರಷ್ಟಾಗಿದೆ. ಕನ್ನಡ ಮಾಧ್ಯಮದಲ್ಲಿ ಶೇ 76.74, ಇಂಗ್ಲಿಷ್ ಮಾಧ್ಯಮದಲ್ಲಿ ಶೇ 93.03 ಫಲಿತಾಂಶ ದಾಖಲಾಗಿದೆ.

ಕಲಾ ವಿಭಾಗದಲ್ಲಿ ಶೇ 85.09, ವಾಣಿಜ್ಯ ವಿಭಾಗದಲ್ಲಿ ಶೇ 92.42, ವಿಜ್ಞಾನ ವಿಭಾಗದಲ್ಲಿ ಶೇ 96.11 ಫಲಿತಾಂಶ ದಾಖಲಾಗಿದೆ.

‘ಇಲಾಖೆ ನಿರ್ದೇಶನದಂತೆ ಈ ಬಾರಿ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಗಳು ಪಿಯು ಕಾಲೇಜುಗಳಿಗೆ ಭೇಟಿ ನೀಡಿ, ಫಲಿತಾಂಶದ ವಿಶ್ಲೇಷಣೆಯನ್ನು ಪರಿಣಾಮಕಾರಿಯಾಗಿ ನಡೆಸಿದ್ದವು. ಘಟಕ ಪರೀಕ್ಷೆಗಳು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಕಾರ್ಯಕ್ರಮವನ್ನು ಕಡ್ಡಾಯಗೊಳಿಸಿದ್ದೆವು. ಸರ್ಕಾರಿ ಕಾಲೇಜುಗಳ ಜೊತೆಗೆ ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳು ಉತ್ತಮ ಫಲಿತಾಂಶಕ್ಕಾಗಿ ವಿಶೇಷ ಮುತುವರ್ಜಿ ವಹಿಸಿದ್ದವು. ಸಾಮೂಹಿಕ ಪರಿಶ್ರಮದಿಂಧ ಉತ್ತಮ ಫಲಿತಾಂಶ ಸಾಧ್ಯವಾಗಿದೆ’ ಎಂದು ಪ್ರಭಾರಿ ಡಿಡಿಪಿಯು ಶ್ರೀಧರ್ ಎಚ್‌.ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭ್ಯಾಸದಲ್ಲಿ ಶಿಸ್ತು ಇರಲಿ’

‘ಆಯಾದಿನದ ಪಾಠವನ್ನು ಅಂದೇ ಓದಿಕೊಳ್ಳುತ್ತಿದ್ದೆ‌. ಬೆಳಿಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದವು. ಮನೆಗೆ ಬಂದು ರಾತ್ರಿ 8ರಿಂದ 10.30ರ ತನಕ ಅಭ್ಯಾಸ ಮಾಡುತ್ತಿದ್ದೆ. ಮನೆಯಲ್ಲಿ ಪಾಲಕರ ಸಹಕಾರ ಕಾಲೇಜಿನಲ್ಲಿ ಉಪನ್ಯಾಸಕರ ಮಾರ್ಗದರ್ಶನ ಓದಿನಲ್ಲಿ ಹೆಚ್ಚು ತೊಡಗಿಕೊಳ್ಳಲು ಪ್ರೇರಣೆಯಾಯಿತು’ ಎಂದು ಅಮೂಲ್ಯ ಕಾಮತ್ ಪ್ರತಿಕ್ರಿಯಿಸಿದರು.

‘ಚಿಕ್ಕಂದಿನಿಂದಲೂ ತಂತ್ರಜ್ಞಾನ ಕ್ಷೇತ್ರದಲ್ಲಿ ನನಗೆ ಆಸಕ್ತಿ. ಎಂಜಿನಿಯರಿಂಗ್ ಮಾಡುವ ಗುರಿಯೊಂದಿಗೆ ಪಿಯುಸಿಯಲ್ಲಿ ಪಿಸಿಎಂಸಿ ಕಾಂಬಿನೇಷನ್ ಆಯ್ಕೆ ಮಾಡಿಕೊಂಡಿದ್ದೆ. ಒಳ್ಳೆಯ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡುವ ಆಸೆಯಿದೆ. ಅಪ್ಪ–ಅಮ್ಮ ಇಬ್ಬರೂ ವೈದ್ಯರು. ನನಗೆ ರಕ್ತವನ್ನು ಕಂಡರೆ ಯಾಕೋ ಭಯ. ಹೀಗಾಗಿ ವೈದ್ಯಕೀಯ ವೃತ್ತಿಗೆ ಹೋಗುವ ಆಸಕ್ತಿ ಇರಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭ್ಯಾಸದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ಜೊತೆಗೆ ಉಪನ್ಯಾಸಕರ ಮಾರ್ಗದರ್ಶನವೂ ಬೇಕು. ನನ್ನ ಮಗಳಿಗೆ ಇವೆರಡೂ ಸಾಧ್ಯವಾದ ಕಾರಣ ರ್‍ಯಾಂಕ್ ಬರಲು ಸಾಧ್ಯವಾಗಿದೆ’ ಎಂದು ಡಾ. ಅನುರಾಧಾ ಕಾಮತ್ ಹೇಳಿದರು. ಅಮೂಲ್ಯ ಅವರ ತಂದೆ ಡಾ. ದಿನೇಶ್ ಕಾಮತ್ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರು ತಾಯಿ ಡಾ. ಅನುರಾಧಾ ಮಕ್ಕಳ ತಜ್ಞೆ‌.

‘ರ್‍ಯಾಂಕ್ ನಿರೀಕ್ಷಿಸಿದ್ದೆ...’

‘ರ್‍ಯಾಂಕ್ ಬರಬಹುದೆಂಬ ನಿರೀಕ್ಷೆ ಇತ್ತು. ಪ್ರಥಮ ರ್‍ಯಾಂಕ್ ದೊರೆತಿದ್ದು ತುಂಬಾ ಖುಷಿಯಾಗಿದೆ. ಪ್ರತಿದಿನ ರಾತ್ರಿ 1ರಿಂದ 2 ಗಂಟೆಯವರೆಗೆ ಅಭ್ಯಾಸ ಮಾಡುತ್ತಿದ್ದೆ. ದ್ವಿತೀಯ ಪಿಯುಸಿ ಅಭ್ಯಾಸ ಮಾಡುತ್ತಲೇ ಸಿ.ಎ ಕೋಚಿಂಗ್ ಹೋಗುತ್ತಿದ್ದೆ. ಮೇ ತಿಂಗಳಲ್ಲಿ ನಡೆಯುವ ಸಿ.ಎ ಫೌಂಡೇಷನ್ ಕೋರ್ಸ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ’ ಎಂದು ದೀಪಶ್ರೀ ಎಸ್ ಪ್ರತಿಕ್ರಿಯಿಸಿದರು.

‘ಕ್ಲಾಸ್‌ನಲ್ಲಿ ಉಪನ್ಯಾಸಕರ ಪಾಠವನ್ನು ಲಕ್ಷ್ಯವಿಟ್ಟು ಕೇಳುವ ಜೊತೆಗೆ ಅವರ ಮಾರ್ಗದರ್ಶನವನ್ನು ಪಾಲಿಸುತ್ತಿದ್ದೆ. ಸ್ನೇಹಿತೆಯರೆಲ್ಲ ಸೇರಿ ಅನುಮಾನಗಳಿದ್ದರೆ ಗುಂಪು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತಿದ್ದೆವು. ಮನೆಯಲ್ಲಿ ಅಪ್ಪ–ಅಮ್ಮ ನನ್ನ ಓದಿಗೆ ಪೂರಕವಾಗುವ ವಾತಾವರಣ ಕಲ್ಪಿಸಿದ್ದರು. ಇವೆಲ್ಲದರ ಜೊತೆಗೆ ದೇವರ ಅನುಗ್ರಹದಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು. ದೀಪಶ್ರೀ ತಂದೆ ಅಶೋಕ್ ಇನ್ವರ್ಟರ್ ಸರ್ವಿಸಿಂಗ್ ವೃತ್ತಿ ನಡೆಸುವವರು ತಾಯಿ ಸುಮಾ ಗೃಹಿಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.