ADVERTISEMENT

ಮನೆಯಿಂದಲೇ ಕಸ ವಿಂಗಡಿಸಿ ನೀಡಿ: ಸಲಹೆ

ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ಸಹಕರಿಸಿ: ಪ್ರೇಮಾನಂದ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:52 IST
Last Updated 22 ಮೇ 2021, 3:52 IST
ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಆಯುಕ್ತ ಅಕ್ಷಯ್‌ ಶ್ರೀಧರ್‌, ಉಪ ಮೇಯರ್‌ ಸುಮಂಗಲಾ ರಾವ್‌ ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿದರು. ಆಯುಕ್ತ ಅಕ್ಷಯ್‌ ಶ್ರೀಧರ್‌, ಉಪ ಮೇಯರ್‌ ಸುಮಂಗಲಾ ರಾವ್‌ ಇದ್ದರು.   

ಮಂಗಳೂರು: ಕಸವನ್ನು ಮೂಲ ದಿಂದಲೇ ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ, ಕಸದ ವಾಹನಗಳಿಗೆ ನೀಡುವ ಮೂಲಕ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಣ ಹಾಗೂ ಹಸಿ ಕಸ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಲ್ಲಿ ಮನವಿ ಮಾಡಲಾಗುತ್ತಿದೆ. ಕೆಲವರು ಇನ್ನೂ ಈ ಬಗ್ಗೆ ಗಮನಹರಿಸಿಲ್ಲ ಎಂದರು.

ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸಿ ನೀಡಿದಲ್ಲಿ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಡೆದ ಭೂ ಕುಸಿತದಂತಹ ದುರ್ಘನೆಯನ್ನು ತಡೆಗಟ್ಟಬಹುದು. ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌–19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಹುತೇಕರು ಹೋಂ ಐಸೊಲೇಶನ್‌ನಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಕಸ ಪ್ರತ್ಯೇಕಿಸದೆ ನೀಡಿದಲ್ಲಿ ಕಸ ವಿಂಗಡಿಸುವ ಕರ್ತವ್ಯ ನಿರ್ವಹಿಸುವ ಕಾರ್ಮಿಕರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದರು.

ADVERTISEMENT

ದಂಡ ಅನಿವಾರ್ಯ: ಕೋವಿಡ್ ನಡುವೆಯೂ ಒಂದು ವಾರದಿಂದ ಕಸ ವಿಂಗಡಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದ್ದು, ಜನರೂ ಸಹಕರಿಸುತ್ತಿದ್ದಾರೆ. ಕೆಲವು ಕಡೆ ತ್ಯಾಜ್ಯ ಸಂಗ್ರಾಹಕ ವಾಹನದ ಚಾಲಕರ ಮೇಲೆ ಹಲ್ಲೆ ಪ್ರಕರಣಗಳೂ ನಡೆದಿವೆ. ಸ್ವಚ್ಛ ಹಾಗೂ ಆರೋಗ್ಯಕರ ಮಂಗಳೂರಿಗೆ ಜನರ ಸಹಕಾರವೂ ಅಗತ್ಯ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಹೇಳಿದರು.

ನಿತ್ಯ ಸಂಗ್ರಹವಾಗುವ 250 ಟನ್‌ವರೆಗಿನ ಕಸದಲ್ಲಿ 100 ಟನ್‌ಗಳಷ್ಟು ಪ್ರತ್ಯೇಕವಾಗಿಯೇ ಸಂಸ್ಕರಣಾ ಘಟಕ ಸೇರುತ್ತಿದೆ. ಸದ್ಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸಹಕಾರ ದೊರೆಯದಿದ್ದರೆ ದಂಡ ವಿಧಿಸುವುದು ಅನಿವಾರ್ಯವಾಗಲಿದೆ ಎಂದರು.

ಕೋವಿಡ್ ಬಾಧಿತರಾಗಿ ಕ್ವಾರಂಟೈನ್ ಹಾಗೂ ಐಸೊಲೇಶನ್‌ ನಲ್ಲಿ ಇರುವವರು ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಆರೋಗ್ಯ ಇಲಾಖೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಪ್ರತ್ಯೇಕವಾಗಿ ಸಂಗ್ರಹಿಸಲು ಹಾಗೂ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಉಪ ಮೇಯರ್ ಸುಮಂಗಲಾ ರಾವ್, ಜಂಟಿ ಆಯುಕ್ತ ಡಾ.ಸಂತೋಷ್ ಕುಮಾರ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಇದ್ದರು.

‘ತ್ಯಾಜ್ಯ ಎಸೆದರೆ ಕ್ರಿಮಿನಲ್‌ ಮೊಕದ್ದಮೆ’

ಕೆಲವೆಡೆ ರಸ್ತೆ ಬದಿಗಳಲ್ಲಿ ಕಸ ಎಸೆಯುತ್ತಿರುವುದು ಕಂಡು ಬಂದಿದ್ದು, ನಗರ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇರಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಎನ್‌ಜಿಟಿ ಮಾರ್ಗಸೂಚಿ ಹಾಗೂ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಬೈಲಾ-2018ರ ಪ್ರಕಾರ ಗರಿಷ್ಠ ₹25ಸಾವಿರದವರೆಗೆ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ಎಚ್ಚರಿಸಿದರು.

ಮನೆಗಳಲ್ಲಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಕರು ತಮ್ಮ ಹಂತದಲ್ಲಿಯೇ ವಿಲೇವಾರಿ ಘಟಕವನ್ನು ಅಳವಡಿಸಿಕೊಂಡಲ್ಲಿ ಆಸ್ತಿ ತೆರಿಗೆಯ ಘನತ್ಯಾಜ್ಯ ಕರದಲ್ಲಿ ಶೇ 50ರಷ್ಟು ವಿನಾಯಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಟೋಲ್‌ಫ್ರೀ ನಂ. 155313 ಅಥವಾ ಮೊಬೈಲ್ ನಂಬರ್ 9449007722ಗೆ ವಾಟ್ಸ್‌ಆ್ಯಪ್‌ ಮೂಲಕ ಸ್ಥಳದ ವಿವರದೊಂದಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.