ವಿಠಲ ಗೌಡ
ಮಂಗಳೂರು: ‘ಬಂಗ್ಲೆಗುಡ್ಡೆಗೆ ಸ್ಥಳ ಮಹಜರಿಗೆ ಎರಡು ಸಲ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೂರು ಮನುಷ್ಯರ ಕಳೇಬರ ಇದ್ದವು. ಎರಡನೇ ಸ್ಥಳ ಮಹಜರಿಗೆ ಹೋದಾಗ ಕೆಳಗಡೆ ಹೆಣಗಳ ರಾಶಿ ಇತ್ತು. ಐದು ಕಳೇಬರಗಳು ನನಗೆ ಕಂಡಿವೆ. ಮಗುವಿನ ಎಲುಬು ಅಲ್ಲಿದೆ. ಅದನ್ನೂ ನೋಡಿದ್ದೇನೆ’ ಎಂದು ವಿಠಲ ಗೌಡ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಆ ಸ್ಥಳದಲ್ಲಿ ಹೆಣ ಮುಚ್ಚಿ ಹಾಕಲು ಮಣ್ಣು ಸರಿಸಿರುವಂತೆ ತೋರುತ್ತದೆ. ಒಂದೇ ಕಡೆ ಅಷ್ಟು ಹೆಣ ರಾಶಿ ಹಾಕಿದ್ದು ನೋಡಿ ನಮಗೂ ಆಶ್ಚರ್ಯ ಆಗಿದೆ. ಸಾಕ್ಷಿ ದೂರುದಾರ ಹೇಳಿದ್ದು ಶೇ 100ರಷ್ಟು ಸತ್ಯ. ಅದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದು ಅವರು ಹೇಳಿರುವ ಅಂಶ ವಿಡಿಯೊದಲ್ಲಿದೆ.
‘ಎಷ್ಟು ಹೊತ್ತಿಗೆ ವಿಚಾರಣೆಗೆ ಕರೆದರೂ ನಾವು ಬರುತ್ತೇವೆ. ರಾತ್ರಿ 1 ಗಂಟೆಗೆ ಫೋನ್ ಮಾಡಿ ಕರೆದರೂ ತನಿಖೆಗೆ ಬರಲು ಸಿದ್ದ. ಸಾಕ್ಷಿ ದೂರುದಾರ, ತೆನಸಿ, ರಂಗ, ಸುಬ್ರಹ್ಮಣ್ಯ ಮೊದಲಾದವರು ನನಗೆ ನೀಡಿದ್ದ ಮಾಹಿತಿ ಪ್ರಕಾರ ಜಾಗ ತೋರಿಸಲು ಸಿದ್ಧ ಇದ್ದೇವೆ’ ಎಂದೂ ಅವರು ಹೇಳಿಕೊಂಡಿದ್ದಾರೆ.
ಸಾಕ್ಷಿ ದೂರುದಾರ ಎಸ್‌ಐಟಿಗೆ ಒಪ್ಪಿಸಿರುವ ತಲೆ ಬುರುಡೆ ತೆಗೆದ ಜಾಗವನ್ನು ವಿಠಲ ಗೌಡ ತೋರಿಸಿದ್ದ ಎನ್ನಲಾಗಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲೆಗುಡ್ಡೆ ಕಾಡಿನ ಒಳಗೆ ಎಸ್‌ಐಟಿ ಅಧಿಕಾರಿಗಳು ವಿಠಲ ಗೌಡ ಅವರನ್ನು ಸೆ.6 ಮತ್ತು ಸೆ.10ರಂದು ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.