ADVERTISEMENT

ಶಂಕರರ ಕೊಡುಗೆ; ಹಿಂದೂ ಧರ್ಮದ ಉಳಿವು- ಮೇಯರ್ ಪ್ರೇಮಾನಂದ ಶೆಟ್ಟಿ

ಶಂಕರಾಚಾರ್ಯರ ಜಯಂತಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:52 IST
Last Updated 6 ಮೇ 2022, 15:52 IST
ಮಂಗಳೂರಿನಲ್ಲಿ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಶಂಕರರ ಚಿತ್ರಕ್ಕೆ ಪುಷ್ಪ ಅರ್ಪಿಸಿದರು.
ಮಂಗಳೂರಿನಲ್ಲಿ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಶಂಕರರ ಚಿತ್ರಕ್ಕೆ ಪುಷ್ಪ ಅರ್ಪಿಸಿದರು.   

ಮಂಗಳೂರು: ‘ಹಲವಾರು ದಾಳಿಗಳ ಹೊರತಾಗಿಯೂ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಉಳಿದು ಬಂದಿರಲು ಪ್ರಮುಖ ಕಾರಣ ಶಂಕರಾಚಾರ್ಯರು’ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರಿನ ಹವ್ಯಕ ಮಂಡಲದ ಆಶ್ರಯದಲ್ಲಿ ಶುಕ್ರವಾರ ನಂತೂರಿನ ಭಾರತಿ ಸಮೂಹ ಸಂಸ್ಥೆಯ ಶಂಕರ ಸಭಾಭವನದಲ್ಲಿ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಅವರು ಮಾತನಾಡಿದರು. ‘ಕ್ರಿಸ್ತಪೂರ್ವದಿಂದಲೂ ಭಾರತ ದೇಶ ಹಲವು ದಾಳಿಗಳಿಗೆ ತುತ್ತಾಗಿ ಸಾಕಷ್ಟು ಸಂಪತ್ತನ್ನು ಕಳೆದುಕೊಂಡಿದೆ. ಆದರೆ, ಯಾರಿಂದಲೂ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ನಾಶಪಡಿಸಲು ಆಗಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಶಂಕರಾಚಾರ್ಯರು ನೀಡಿದ ಕಾಣಿಕೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಮಾತನಾಡಿ, ‘ಸಂಸ್ಕೃತಿ, ಸನಾತನ ಧರ್ಮ ಹಾಗೂ ವೈದಿಕ ಧರ್ಮ ತನ್ನ ಅಂತಃಸತ್ವ ಕಳೆದುಕೊಂಡಾಗ, ಅದನ್ನು ಒಂದು ಚೌಕಟ್ಟಿನೊಳಗೆ ತಂದಿಟ್ಟು ಧರ್ಮಸಂದೇಶ ಸಾರಿದ ಮಹಾತ್ಮರು ಶಂಕರಾಚಾರ್ಯರು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅಗಾಧ ಜ್ಞಾನ ಸಂಪಾದನೆ ಮಾಡಿ ದೇಶದಾದ್ಯಂತ ಧರ್ಮ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಆಚಾರ್ಯರ ವಾಣಿಯಂತೆ ಆತ್ಮವಂಚನೆಯಿಲ್ಲದೆ ನಮ್ಮೊಳಗೆ ಶ್ರೇಷ್ಠವಾಗಿದ್ದಾಗಲೇ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಅಹಂ ಬ್ರಹ್ಮಾಸ್ಮಿ ಎಂಬ ಅವರ ಸಂದೇಶವು ಕೂಡ ಅದನ್ನೇ ಬೋಧಿಸುತ್ತದೆ’ ಎಂದರು.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಹವ್ಯಕ ಮಂಡಲ ಅಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಭಾರತಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬ್ಯಾಂಕ್ ನಿವೃತ್ತ ಅಧಿಕಾರಿ ದಿವಾಣ ಕೇಶವ ಭಟ್ ವಿಶೇಷ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.