ADVERTISEMENT

ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌

ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ‍್ಯಾಪಿಡ್, ಬ್ಲಿಟ್ಜ್‌ ಮುಕ್ತ ಟೂರ್ನಿ: ಆರವ್‌, ಆರ್ಯನ್ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 23:23 IST
Last Updated 19 ಅಕ್ಟೋಬರ್ 2025, 23:23 IST
ಪ್ರಶಸ್ತಿಯೊಂದಿಗೆ ಶರಣ್ ರಾವ್‌
ಪ್ರಶಸ್ತಿಯೊಂದಿಗೆ ಶರಣ್ ರಾವ್‌   

ಮಂಗಳೂರು: ಕುತೂಹಲಕಾರಿ ತಿರುವುಗಳನ್ನು ಕಂಡ ಪಂದ್ಯಗಳಲ್ಲಿ ಧೃತಿಗೆಡದೆ ಮುನ್ನಡೆದ ಮಂಗಳೂರಿನ ಶರಣ್ ರಾವ್, ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ‍್ಯಾಪಿಡ್, ಬ್ಲಿಟ್ಜ್‌ ಮುಕ್ತ ಚೆಸ್‌ ಟೂರ್ನಿಯ ಎರಡೂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ರ‍್ಯಾಪಿಡ್‌ನಲ್ಲಿ ಆರವ್ ಸರ್ಬಾಲಿಯ ಹಾಗೂ ಬ್ಲಿಟ್ಜ್‌ನಲ್ಲಿ ಆರ್ಯನ್ ಫುತಾನೆ ರನ್ನರ್ ಅಪ್ ಆದರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಟೂರ್ನಿಯ ರ‍್ಯಾಪಿಡ್ ವಿಭಾಗದಲ್ಲಿ ಶರಣ್ 8 ಪಾಯಿಂಟ್ ಗಳಿಸಿದರೆ ಬ್ಲಿಟ್ಜ್‌ನಲ್ಲಿ 8.5 ಪಾಯಿಂಟ್ ಕಲೆ ಹಾಕಿದರು.

ADVERTISEMENT

ಮೊದಲ ದಿನವಾದ ಶನಿವಾರ ರ‍್ಯಾಪಿಡ್ ವಿಭಾಗದ ಆರು ಸುತ್ತುಗಳ ಮುಕ್ತಾಯಕ್ಕೆ ಮಂಗಳೂರಿನ ಲಕ್ಷಿತ್ ಸಾಲ್ಯಾನ್ ಮತ್ತು ಆಗಸ್ಟಿನ್ ತಲಾ 6 ಪಾಯಿಂಟ್‌ಗಳನ್ನು ಗಳಿಸಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಅಗ್ರ ಶ್ರೇಯಾಂಕಿತ ಶರಣ್ ರಾವ್ ಒಂದು ಪಂದ್ಯ ಡ್ರಾ ಮಾಡಿಕೊಂಡು 5.5 ಪಾಯಿಂಟ್ ಗಳಿಸಿದ ಏಕೈಕ ಆಟಗಾರ ಆಗಿದ್ದರು. ಭಾನುವಾರದ 3 ಸುತ್ತುಗಳ ಪೈಕಿ 2ರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡರು. 16ನೇ ಶ್ರೇಯಾಂಕಿತ ಆರವ್ ಸರ್ಬಾಲಿಯ ಕೂಡ 8 ಪಾಯಿಂಟ್ ಗಳಿಸಿದರು. ಉತ್ತಮ ಟೈ ಬ್ರೇಕರ್ ಆಧಾರದಲ್ಲಿ ಶರಣ್‌ಗೆ ಚಾಂಪಿಯನ್ ಪಟ್ಟ ನೀಡಲಾಯಿತು.

ಪಂಕಜ್ ಭಟ್‌, ವಿಹಾನ್ ಸಚ್‌ದೇವ್ ಮತ್ತು ಅಭಿನವ್ ಆನಂದ್ ತಲಾ 7.5 ಪಾಯಿಂಟ್ ಗಳಿಸಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಆಗಸ್ಟಿನ್ 6 ಮತ್ತು ಲಕ್ಷಿತ್‌ 8ನೇ ಸ್ಥಾನಕ್ಕೆ ಕುಸಿದರು. 2ನೇ ಶ್ರೇಯಾಂಕಿತೆ ಇಶಾ ಶರ್ಮಾ 10ನೇ ಸ್ಥಾನ ಗಳಿಸಿದರು.

ಭಾನುವಾರ ನಡೆದ 9 ಸುತ್ತುಗಳ ಬ್ಲಿಟ್ಜ್‌ನಲ್ಲಿ ಶರಣ್, ಅಮೋಘ ಪ್ರದರ್ಶನ ನೀಡಿದರು. ಅಯಾನ್ 8 ಪಾಯಿಂಟ್ ಗಳಿಸಿದರು. ತಲಾ 7.5 ಪಾಯಿಂಟ್‌ಗಳೊಂದಿಗೆ ಪ್ರಜ್ವಲ್ ಶೇಟ್ ಮತ್ತು ಆಗಸ್ಟಿನ್ ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿದರು.