ADVERTISEMENT

ಕುಡುಪು ದೇವಸ್ಥಾನದ ಷಷ್ಠಿ ಮಹೋತ್ಸವ: ಹಿಂದೂಯೇತರರ ವ್ಯಾಪಾರಕ್ಕೆ ಅವಕಾಶ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 4:10 IST
Last Updated 8 ಡಿಸೆಂಬರ್ 2023, 4:10 IST
ಮಂಗಳೂರಿನ ಹೊರವಲಯದಲ್ಲಿರುವ ಕುಡುಪು ಶ್ರೀಅನಂತಪದ್ಮನಾಭ ದೇವಸ್ಥಾನ
ಮಂಗಳೂರಿನ ಹೊರವಲಯದಲ್ಲಿರುವ ಕುಡುಪು ಶ್ರೀಅನಂತಪದ್ಮನಾಭ ದೇವಸ್ಥಾನ   

ಮಂಗಳೂರು: ಸಮೀಪದ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಇದೇ 14ರಿಂದ 19ವರೆಗೆ ಜಾತ್ರೆ ನಡೆಯಲಿದ್ದು, ಇದರ ವ್ಯಾಪಾರದಲ್ಲಿ ಹಿಂದೂಯೇತರರಿಗೆ ಅವಕಾಶ ಕಲ್ಪಿಸಿಲ್ಲ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

‘ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕುಡುಪು ದೇವಸ್ಥಾನದ ಷಷ್ಠಿ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಪ್ರಾಂಗಣದ ಹೊರಗಡೆ ಸಂತೆ ವ್ಯಾಪಾರ ನಡೆಯುತ್ತದೆ. ಇಲ್ಲೂ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಾಗ ಧಾರ್ಮಿಕ ತಾರತಮ್ಯ ನಡೆಸಲಾಗುತ್ತಿದೆ. ಜಾತ್ರೆಗಳನ್ನೇ ನಂಬಿ ಬದುಕುವ ಬಡ ಸಂತೆ ವ್ಯಾಪಾರಿಗಳ ಬದುಕುವ ಹಕ್ಕನ್ನು ರಕ್ಷಿಸಲು ಮತ್ತೆ ಜಿಲ್ಲಾಡಳಿತ ವಿಫಲ ಆಗಿದೆ’ ಎಂದು ಸಮನ್ವಯ ಸಮಿತಿಯ ಸಂಚಾಲಕ ಬಿ.ಕೆ.ಇಮ್ತಿಯಾಜ್‌ ಆರೋಪಿಸಿದರು.

‘ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಇಲ್ಲಿ ಟೆಂಡರ್‌ ನೀಡಲಾಗುತ್ತಿದೆ. ಅವರು ಹಿಂದೂಯೇತರರಿಗೆ ವ್ಯಾಪಾರಿ ಮಳಿಗೆಗಳನ್ನು ಹಾಕಲು ಅವಕಾಶ ನೀಡುವುದಿಲ್ಲ’ ಎಂದು ಅವರು ದೂರಿದರು. ಈ ವಿಷಯವಾಗಿ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ADVERTISEMENT

‘ದೇವಸ್ಥಾನದ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಮಳಿಗೆಗಳನ್ನು ಹಾಕಿ ಜಾತ್ರೆ ವ್ಯಾಪಾರ ನಡೆಸುವುದಕ್ಕೆ ಪ್ರತಿ ವರ್ಷದಂತೆಯೇ ಈ ವರ್ಷವೂ ಟೆಂಡರ್‌ ಕರೆದೇ ಜಾಗ ಒದಗಿಸಿದ್ದೇವೆ. ಡಿ.5ರಂದು ನಡೆದ ಹರಾಜಿನಲ್ಲಿ ಐವರು ಭಾಗವಹಿಸಿದ್ದರು. ಹೆಚ್ಚು ಮೊತ್ತ ನೀಡಿದವರಿಗೆ ಮಳಿಗೆ ಹಾಕಲು ಜಾಗ ಒದಗಿಸಿದ್ದೇವೆ. ನವೀನ್‌ ಎಂಬುವವರು ₹ 1.15 ಲಕ್ಷ ಮೊತ್ತಕ್ಕೆ ಟೆಂಡರ್‌ ವಹಿಸಿಕೊಂಡಿದ್ದಾರೆ. ಹಿಂದಿನಿಂದಲೂ ಹಿಂದೂಯೇತರ ವ್ಯಾಪಾರಿಗಳಿಗೆ ಇಲ್ಲಿ ಮಳಿಗೆ ಹಾಕಲು ಅವಕಾಶ ನೀಡುತ್ತಿರಲಿಲ್ಲ. ಈ ವರ್ಷವೂ ಟೆಂಡರ್‌ ನೋಟಿಸ್‌ನಲ್ಲೂ ಇದನ್ನು ಸ್ಪಷ್ಟಪಡಿಸಲಾಗಿತ್ತು’ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ 17 ಮತ್ತು 18ರಂದು ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತದೆ. ಇದೇ 14ರಿಂದ 19ರವರೆಗೂ ಈ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

ವಿಎಚ್‌ಪಿ: ಕುಡುಪು ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರ ಸ್ವಾಗತಾರ್ಹ ಎಂದು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.