ADVERTISEMENT

ಸಿಂಗಪುರ ಹಡಗಿಗೆ ಬೆಂಕಿ: ಇಬ್ಬರು ನೌಕಾ ಸಿಬ್ಬಂದಿ ಸ್ಥಿತಿ ಗಂಭೀರ

ಕೇರಳದ ಕೋಯಿಕ್ಕೋಡ್ ಬಳಿ ಬೆಂಕಿ ಹೊತ್ತಿಕೊಂಡ ಹಡಗು– ಗಾಯಾಳುಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:29 IST
Last Updated 10 ಜೂನ್ 2025, 15:29 IST
ಕರಾವಳಿ ರಕ್ಷಣಾ ಪಡೆಯ ಹಡಗುಗಳು, ಕೇರಳದ ಕೋಯಿಕ್ಕೋಡ್ ಬೇಪೂರ್ ಬಳಿ ಬೆಂಕಿ ಹೊತ್ತಿಕೊಂಡಿರುವ ಹಡಗಿನ ಬೆಂಕಿ ನಂದಿರುವ ಕಾರ್ಯದಲ್ಲಿ ತೊಡಗಿವೆ
ಕರಾವಳಿ ರಕ್ಷಣಾ ಪಡೆಯ ಹಡಗುಗಳು, ಕೇರಳದ ಕೋಯಿಕ್ಕೋಡ್ ಬೇಪೂರ್ ಬಳಿ ಬೆಂಕಿ ಹೊತ್ತಿಕೊಂಡಿರುವ ಹಡಗಿನ ಬೆಂಕಿ ನಂದಿರುವ ಕಾರ್ಯದಲ್ಲಿ ತೊಡಗಿವೆ   

ಮಂಗಳೂರು: ಸಿಂಗಪುರದ ಎಂ.ವಿ ವ್ಯಾನ್ ಹೈ 503 ಹಡಗಿಗೆ ಕೇರಳದ ಕೋಯಿಕ್ಕೋಡ್ ಬೇಪೂರ್ ಬಳಿ ಅರಬ್ಬಿಸಮುದ್ರದಲ್ಲಿ ಬೆಂಕಿ  ಹೊತ್ತಿಕೊಂಡಿದ್ದು, ಈ ದುರ್ಘಟನೆಯಲ್ಲಿ ಗಾಯಗೊಂಡ ಆರು ನೌಕಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

‘ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಆರು ನೌಕಾ ಸಿಬ್ಬಂದಿಯಲ್ಲಿ ಮೂವರು ಚೀನಾದವರು, ಇಬ್ಬರು ಮ್ಯಾನ್ಮಾರ್ ಹಾಗೂ ಇಬ್ಬರು ಇಂಡೊನೇಷ್ಯಾದವರು. ಇಬ್ಬರು ಸಿಬ್ಬಂದಿಯ (ಲು ಯಾನ್ಲಿ ಮತ್ತು ಸೊನಿತುರ್ ಹೆನಿ) ದೇಹದಲ್ಲಿ ಶೇ 40ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರ ಶ್ವಾಸಕೋಶಕ್ಕೂ ಹಾನಿಯಾಗಿದ್ದು ಉಸಿರಾಡಲೂ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ನಾಲ್ವರು ಸಿಬ್ಬಂದಿ (ಷು ಫ್ಯಾಬಾವೊ, ಗುವೊ ಲಿನಿನೊ, ಥೆಯಿನ್ ಥಾನ್ ಹೆತೆ ಮತ್ತು ಕಿ ಝಾ ಹುತು) ದೇಹದಲ್ಲೂ ಸುಟ್ಟಗಾಯಗಳಿವೆ’ ಎಂದು ಎ.ಜೆ. ಆಸ್ಪತ್ರೆಯ ತಜ್ಞವೈದ್ಯ ದಿನೇಶ್ ಕದಂ ಸುದ್ದಿಗಾರರಿಗೆ ತಿಳಿಸಿದರು.

ಬೆಂಕಿ ಹೊತ್ತಿಕೊಂಡ ಹಡಗಿನಲ್ಲಿ 22 ಸಿಬ್ಬಂದಿ ಇದ್ದು, ಅವರಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಚೀನಾದ ಎಂಟು ಮಂದಿ, ತೈವಾನ್‌ ಮತ್ತು ಮ್ಯಾನ್ಮಾರ್‌ನ ತಲಾ ನಾಲ್ವರು, ಇಂಡೊನೇಷ್ಯಾದ ಇಬ್ಬರು ಸೇರಿದಂತೆ ಒಟ್ಟು 18 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಐಎನ್‌ಎಸ್ ಸೂರತ್ ಹಡಗಿನಲ್ಲಿ ಅವರನ್ನು ಸೋಮವಾರ ರಾತ್ರಿ ಮಂಗಳೂರಿಗೆ ಕರೆತರಲಾಗಿದೆ. ಸುರಕ್ಷಿತವಾಗಿರುವ 12 ಸಿಬ್ಬಂದಿಗೆ ನಗರದ ಹೋಟೆಲ್ ಒಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದರು. 

ADVERTISEMENT

ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಅವರು ಮಾಹಿತಿ ನೀಡಿದರು. 

‘ಹಡಗಿನ ಮಧ್ಯಭಾಗದಿಂದ ಸರಕು ಕಂಟೇನರ್‌ಗಳನ್ನು ಇಡುವ ಜಾಗದವರೆಗೂ ಬೆಂಕಿ ವ್ಯಾಪಿಸಿದ್ದು ಸ್ಫೋಟಗಳು ಸಂಭವಿಸುತ್ತಿವೆ. ಹಡಗಿನ ಮುಂಭಾಗದ ಪ್ರದೇಶದಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ದಟ್ಟ ಹೊಗೆ ಈಗಲೂ ಆವರಿಸಿದೆ.  ಹಡಗು ಶೇ 10ರಿಂದ 15 ಡಿಗ್ರಿಗಳಷ್ಟು ವಾಲಿಕೊಂಡಿದ್ದು, ಅದರಲ್ಲಿದ್ದ ಬಹುತೇಕ ಕಂಟೇನರ್‌ಗಳು ಸಮುದ್ರಪಾಲಾಗಿವೆ. ಕರಾವಳಿ ರಕ್ಷಣಾ ಪಡೆಯ ಸಮುದ್ರ ಪ್ರಹಾರಿ ಹಾಗೂ ಸಚೇತ್ ಹಡಗುಗಳು ಬೆಂಕಿ ನಂದಿಸುವ ಹಾಗೂ ಸುತ್ತಲಿನ ಪ್ರದೇಶವನ್ನು ತಂಪಾಗಿಸುವ ಕಾರ್ಯದಲ್ಲಿ ತೊಡಗಿವೆ. ಕರಾವಳಿ ರಕ್ಷಣಾ ಪಡೆಯ ಸಮರ್ಥ್ ಹಡಗನ್ನು ಕೊಚ್ಚಿಯಿಂದ ಅಗ್ನಿಶಾಮಕ ಕಾರ್ಯಾಚರಣೆಗೆ ಕಳುಹಿಸಲಾಗಿದೆ. ಎರಡು ಪುಟ್ಟ ನೌಕೆಗಳು ಕಾರ್ಯಾಚರಣೆಗೆ ಕಳುಹಿಸಲಾಗಿದೆ’ ಎಂದು  ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.