ADVERTISEMENT

ಮಾನವೀಯತೆ ಜಾಗದಲ್ಲಿ ಮತೀಯ ಪ್ರಭಾವ: ಸಾಹಿತಿ ಬರಗೂರು ರಾಮಚಂದ್ರಪ್ಪ

ಮೂವರಿಗೆ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:25 IST
Last Updated 14 ಆಗಸ್ಟ್ 2025, 6:25 IST
ಮೂಡುಬಿದಿರೆಯ ಕನ್ನಡ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಡಾ.ಎನ್.ಟಿ ಭಟ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮೂಡುಬಿದಿರೆಯ ಕನ್ನಡ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬರಗೂರು ರಾಮಚಂದ್ರಪ್ಪ, ಡಾ.ಎನ್.ಟಿ ಭಟ್ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಮೂಡುಬಿದಿರೆ: ಕನ್ನಡ ಸಾಹಿತ್ಯ ಲೋಕದಲ್ಲಿ ವೈಚಾರಿಕ ಪರಂಪರೆಯನ್ನು ಕಾಣಬಹುದು. ಆದರೆ, ಇಂದು ವಿವೇಕದ ಜಾಗವನ್ನು ಅವಿವೇಕ ಆಕ್ರಮಿಸಿಕೊಳ್ಳುತ್ತಿದ್ದರೆ, ಮಾನವೀಯತೆಯ ಜಾಗದಲ್ಲಿ ಮತೀಯತೆಯ ಪ್ರಭಾವ ಹೆಚ್ಚಾಗುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಮೂಡುಬಿದಿರೆ ಶಿವರಾಮ ಕಾರಂತ ಪ್ರತಿಷ್ಠಾನದ ವತಿಯಿಂದ ಕನ್ನಡ ಭವನದಲ್ಲಿ ಬುಧವಾರ ನಡೆದ 2025ನೇ ಸಾಲಿನ ಶಿವರಾಮ ಕಾರಂತ ಪ್ರಶಸ್ತಿ ಹಾಗೂ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‌

‘ಸುಳ್ಳಿಗೆ ಸಾಕ್ಷಿ ಬೇಕಾಗಿಲ್ಲ, ಆದರೆ ಸತ್ಯಕ್ಕೆ ಸಾಕ್ಷಿ ಕೊಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಬಿಕ್ಕಟ್ಟಿನ ನಡುವೆ ನಾವು ವೈಚಾರಿಕ ಪರಂಪರೆ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

ಸಾಹಿತಿಗಳಾದ ಪ್ರೊ.ಎನ್.ಟಿ ಭಟ್, ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರಿಗೆ ಶಿವರಾಮ ಕಾರಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೋಹನ್ ಕುಂಟಾರ್, ಡಾ.ಎಚ್.ಎಸ್. ಅನುಪಮಾ , ಸಬಿತಾ ಬನ್ನಾಡಿ ಮತ್ತು ಶ್ರೀಪಾದ ಭಟ್ ಅವರನ್ನು ಶಿವರಾಮ ಕಾರಂತ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಸ್.ಎನ್ ಹೆಬ್ಬಾರ್ ಸಮಾರಂಭ ಉದ್ಘಾಟಿಸಿ, ಮೇರು ವ್ಯಕ್ತಿತ್ವದ ಶಿವರಾಮ ಕಾರಂತರು ಅಗಾಧ ಹಾಗೂ ವೈವಿಧ್ಯಮಯ ಜ್ಞಾನಭಂಡಾರವನ್ನು ಹೊಂದಿದ್ದರು. ಅವರು ವಜ್ರದಂತೆ ಕಠಿಣ ಮತ್ತು ಕುಸುಮದಂತೆ ಮೃದು ಸ್ವಭಾವದವರಾಗಿದ್ದರು ಎಂದರು.

ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಮಾವಿನಕುಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪದಾಧಿಕಾರಿಗಳಾದ ಎಂ.ಬಾಹುಬಲಿ ಪ್ರಸಾದ್, ಕೆ.ಶ್ರೀಪತಿ ಭಟ್, ರಾಜರಾಂ ನಾಗರಕಟ್ಟೆ, ಧನಂಜಯ್ ಕುಂಬ್ಳೆ, ಕೃಷ್ಣರಾಜ ಹೆಗ್ಡೆ, ವೇಣುಗೋಪಾಲ ಶೆಟ್ಟಿ, ಭಾನುಮತಿ ಶೀನಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.