ಪುತ್ತೂರು: ಒಂದು ವರ್ಷ 10 ತಿಂಗಳ ಪ್ರಾಯದಲ್ಲೇ ಸಾಮಾನ್ಯ ಜ್ಞಾನ ಹೊಂದಿ ವಿವಿಧ ಪ್ರಾಣಿ, ಪಕ್ಷಿ, ವಾಹನ, ತರಕಾರಿ, ಬಣ್ಣ, ಪರಿಕರಗಳು ಸೇರಿ ವಿವಿಧ ಬಗೆಯ ವಸ್ತುಗಳ ಗುರುತಿಸುವಿಕೆಯೊಂದಿಗೆ ಗಮನಾರ್ಹ ಅರಿವಿನ ಸಾಮರ್ಥ್ಯ ಮೆರೆದಿರುವ ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಪಡುಮಲೆ ಮೇಗಿನ ಮನೆಯ ಬಾಲೆ ಶ್ಲೋಕ ರೈ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕಿಯಾಗಿ ಹೊರಹೊಮ್ಮಿದ್ದಾಳೆ.
ಪಡುಮಲೆ ಮೇಗಿನಮನೆ ಲೋಕೇಶ್ ರೈ–ಸುಷ್ಮಿತಾ ರೈ ದಂಪತಿ ಪುತ್ರಿಯಾದ ಶ್ಲೋಕ ರೈ 2023ರ ಸೆಷ್ಟೆಂಬರ್ 8ರಂದು ಜನಿಸಿದ್ದು, ತನ್ನ ಅದ್ಭುತ ಸಾಮರ್ಥ್ಯದ ಮೂಲಕ ಐಬಿಆರ್ ಸಾಧಕಿ (ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್) ಎಂಬ ಬಿರುದು ಪಡೆಯುವ ಜತೆಗೆ ಪ್ರಶಸ್ತಿಯ ಭಾಗವಾಗಿ ಚಿನ್ನದ ಪದಕ, ಪ್ರಮಾಣಪತ್ರ, ಪುಸ್ತಕ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಯತಕಾಲಿಕೆಯಲ್ಲಿ ಒಂದು ಸ್ಥಾನ ಪಡೆದಿದ್ದಾಳೆ.
ಹೆತ್ತವರ ಹಾಗೂ ಮನೆ ಮಂದಿಯ ಗಮನಕ್ಕೆ ಬಂದಿತ್ತು. 12 ತಿಂಗಳ ಪ್ರಾಯದಲ್ಲಿದ್ದಾಗಲೇ ಆಕೆ ಪುಸ್ತಕಗಳಲ್ಲಿರುವ ವರ್ಣರಂಜಿತ ಚಿತ್ರಗಳ ಅರಿವಿನ ಕಡೆಗೆ ಹೆಚ್ಚಿನ ಆಸಕ್ತಿ ತೋರಿದ್ದಳು. ಹೊಸ ವಿಚಾರ-ಮಾಹಿತಿಗಳನ್ನು ಅನ್ವೇಷಿಸುವ ಉತ್ಸಾಹ ಹೊಂದಿದ್ದಳು. ಆಕೆಯಲ್ಲಿನ ಅರಿವಿನ ಕುತೂಹಲವನ್ನು ಗಮನಿಸುತ್ತಲೇ ಬಂದಿದ್ದ ತಾಯಿ ಸುಷ್ಮಿತಾ ರೈ ಅವರು ಹೊಸ ವಿಧಾನಗಳ ಮೂಲಕ ವಿಭಿನ್ನ ವಿಷಯಗಳನ್ನು ಕಲಿಸಲು ಪ್ರಾರಂಭಿಸುವ ಮೂಲಕ ಆಕೆಗೆ ಜ್ಞಾನ ಮತ್ತು ಅರಿವಿನ ಧಾರೆ ಎರೆದಿದ್ದರು. ಆಕೆಯ ಅರಿವಿನ ದಾಹಕ್ಕೆ ಮನೆ ಮಂದಿಯೂ ಪ್ರೋತ್ಸಾಹ ನೀಡಿದ್ದರು. ಇದು ಶ್ಲೋಕ ರೈಗೆ ಗಮನಾರ್ಹ ಸಾಧನೆ ಮಾಡಲು ಮೆಟ್ಟಿಲುಗಳಾಯಿತು.
ಎಳೆಯ ಮಗುವಾಗಿದ್ದಾಗಲೇ ಶ್ಲೋಕ ರೈಯಲ್ಲಿದ್ದ ಪ್ರತಿಭೆ ಅರಿತಿದ್ದ ಆಕೆಯ ತಾಯಿ ಸುಷ್ಮಿತಾ ರೈ ಮತ್ತು ಮನೆಯವರು ಆಕೆಯ ಪ್ರತಿಭಾ ಪ್ರದರ್ಶನವನ್ನು ವಿಡಿಯೊ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸಲ್ಲಿಸಿದ್ದರು. 25 ಪ್ರಾಣಿಗಳು, 14 ಬಗೆಯ ಹಣ್ಣುಗಳು, 15 ವಾಹನಗಳು, 14 ಪಕ್ಷಿಗಳು, 11 ವಿವಿಧ ಬಣ್ಣಗಳು, 15 ವಿವಿಧ ಬಗೆಯ ತರಕಾರಿ, 7 ವೃತ್ತಿಪರ ಮತ್ತು 13 ಫ್ಯಾಷನ್ ಪರಿಕರಗಳು, 19 ವಿವಿಧ ಬಗೆಯ ವಸ್ತುಗಳು ಹಾಗೂ 16 ಕ್ರಿಯೆಗಳನ್ನು ಗುರುತಿಸುವ ಮೂಲಕ 1 ವರ್ಷ 10 ತಿಂಗಳ ಪ್ರಾಯದಲ್ಲಿ 25 ತುಣುಕುಗಳ ಜ್ಯಾಮಿತೀಯ ಆಕಾರದ ಒಗಟು ( ಜಿಯೋಮೆಟ್ರಿಕ್ ಶೇಪ್ ಪ್ಲಸ್ ಆಫ್ 25 ಪೀಸಸ್) ಪೂರ್ಣಗೊಳಿಸಿರುವುದಕ್ಕಾಗಿ ಶ್ಲೋಕ ರೈಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ಐಬಿಆರ್ ಸಾಧಕಿ’ ಮನ್ನಣೆ ಲಭಿಸಿದೆ. ಮೌಲ್ಯಮಾಪನ ಮಾಡಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಕಳೆದ ಜುಲೈ 22ರಂದು ಸಾಧಕಿ ಬಿರುದು ದೃಢಪಡಿಸಿದೆ.
ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ ಪಡುಮಲೆಯ ಈ ಬಾಲೆಯ ಗಮನಾರ್ಹ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.