ADVERTISEMENT

ಮಂಗಳೂರು | ಈದ್ ತನಕ ಮಳಿಗೆಗಳು ಬಂದ್: ಮುಸ್ಲಿಂ ವ್ಯಾಪಾರಿಗಳ ಸಂಘಟನೆ ನಿರ್ಧಾರ

ಕೋವಿಡ್–19 ಹೋರಾಟಕ್ಕೆ ಮುಸ್ಲಿಂ ವ್ಯಾಪಾರಿಗಳ ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 5:47 IST
Last Updated 7 ಮೇ 2020, 5:47 IST
ರಂಜಾನ್ ಪ್ರಾರ್ಥನೆ (ಪ್ರಾತಿನಿಧಿಕ ಚಿತ್ರ)
ರಂಜಾನ್ ಪ್ರಾರ್ಥನೆ (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಜನನಿಬಿಡ ಹಂಪನಕಟ್ಟಾದಲ್ಲಿನ ಮೂರು ವಾಣಿಜ್ಯ ಸಂಕೀರ್ಣ ಮತ್ತು ಸುತ್ತಲಿನ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಇತ್ಯಾದಿ ಮಳಿಗೆಗಳನ್ನು ರಂಜಾನ್ ಈದ್ ಉಲ್‌ ಫಿತ್ರ್ (ಮೇ 25) ತನಕ ತೆರೆಯದಿರಲು ಮುಸ್ಲಿಂ ವ್ಯಾಪಾರಿಗಳ ಸಂಘಟನೆ ನಿರ್ಧರಿಸಿದೆ.

‘ನಮ್ಮ ಫೋರಂ ನೇತೃತ್ವದಲ್ಲಿ ಹಂಪನಕಟ್ಟಾ ಸುತ್ತಲಿನ ಸುಮಾರು 300ರಷ್ಟು ಮಳಿಗೆಗಳು ಈದ್ ತನಕ ತೆರೆಯದಿರಲು ನಿರ್ಧರಿಸಿವೆ. ಕೇವಲ ಮುಸ್ಲಿಂ ವ್ಯಾಪಾರಸ್ಥರು ಮಾತ್ರವಲ್ಲ ಇತರ ಧರ್ಮೀಯರೂ ಬೆಂಬಲ ನೀಡಿದ್ದು, ಮುಂದಿನ ನಿರ್ಣಯ ತನಕ ಮಳಿಗೆ ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ’ ಎಂದು ಮುಸ್ಲಿಂ ವ್ಯಾಪಾರಿಗಳ ಸಂಘಟನೆಯಾದ ಕೆಟಿಎ ಯೂತ್ ಫೋರಂ ಅಧ್ಯಕ್ಷ ಮೌಶಿರ್ ಅಹ್ಮದ್ ಸಾಮಣಿಗೆ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಪೈಕಿ ಹೆಚ್ಚಿನ ಮಳಿಗೆಗಳು ಹಂಪನಕಟ್ಟಾದ ಕುನೀಲ್, ಟೋಕಿಯೊ, ಅಕ್ಬರ್ ಕಾಂಪ್ಲೆಕ್ಸ್‌ಗಳಲ್ಲಿವೆ.

‘ಈ ಮಾದರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮುಸ್ಲಿಂ ವ್ಯಾಪಾರಿಗಳು ಅನುಸರಿಸಲು ಮುಂದಾಗಿದ್ದಾರೆ. ಇದು ‘ಕೋವಿಡ್–19’ ವಿರುದ್ಧದ ಹೋರಾಟಕ್ಕೆ ನಾವು ನೀಡುತ್ತಿರುವ ಬೆಂಬಲವಾಗಿದೆ’ ಎಂದರು.

ADVERTISEMENT

‘ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಮೇ 17ರ ತನಕ ಲಾಕ್‌ಡೌನ್ ವಿಸ್ತರಿಸಿದೆ. ಆದರೆ, ಲಾಕ್‌ಡೌನ್‌ ಮುಗಿದ ಕೂಡಲೇ ಹಬ್ಬದ ಸಿದ್ಧತೆಗಳು ಶುರುವಾಗುವ ಕಾರಣ ಈ ನಿರ್ಧಾರ ಮಾಡಿದ್ದೇವೆ’ ಎಂದರು.

ಸರಳ ಆಚರಣೆಗೆ ಖಾಝಿ ಕರೆ:ಇದಕ್ಕೂ ಪೂರ್ವದಲ್ಲೇ ಉಡುಪಿ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅವರು, ರಂಜಾನ್ ಅಂತ್ಯದ ತನಕ ಲಾಕ್‌ಡೌನ್ ಮುಂದುವರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.

‘ಈದ್‌ ಉಲ್‌ ಫಿತ್ರ್‌ ಸಂಭ್ರಮಕ್ಕಾಗಿ ಬಟ್ಟೆ, ಚಪ್ಪಲಿ, ಫ್ಯಾನ್ಸಿ ಇತ್ಯಾದಿಗಳನ್ನು ಖರೀದಿ ಮಾಡುತ್ತಾರೆ. ಖರೀದಿಗಾಗಿ ಜನಸಂದಣಿ ಹೆಚ್ಚುವ ಸಾಧ್ಯತೆ ಇದೆ. ಅದಕ್ಕಾಗಿ ಸರಳವಾಗಿ ಹಬ್ಬ ಆಚರಿಸಬೇಕು’ ಎಂದು ಸಂದೇಶ ನೀಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ರಂಜಾನ್‌ನಲ್ಲಿ ಜಕಾತ್ (ದಾನ) ಪವಿತ್ರ ಕಾರ್ಯವಾಗಿದ್ದು, ಬಡವರಿಗೆ, ಶಿಕ್ಷಣಕ್ಕೆ, ನೊಂದವರಿಗೆ ಈ ಬಾರಿ ದಾನ ಮಾಡಿ ಎಂದು ಮನವಿ ಮಾಡಲಾಗುತ್ತಿದೆ.

ಖರೀದಿ ಹಣವನ್ನು ಉಳಿಸುವ ಮೂಲಕ ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲು ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿಯೂ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.