ADVERTISEMENT

ಮಂಗಳೂರು: ಎನ್‌ಇಪಿ ಪರ 10.16 ಲಕ್ಷ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 6:05 IST
Last Updated 18 ಜನವರಿ 2024, 6:05 IST

ಮಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸುವಂತೆ ಒತ್ತಾಯಿಸಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್ ಸಂಘಟನೆಯು ರಾಜ್ಯದಲ್ಲಿ 10.16 ಲಕ್ಷ ಸಹಿ ಸಂಗ್ರಹ ನಡೆಸಿದ್ದು, ಇದನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಸಂಘಟನೆಯ ವಿಭಾಗ ಸಂಚಾಲಕ ರಮೇಶ ಕೆ. ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ, 2,630 ಶಾಲೆ– ಕಾಲೇಜುಗಳಿಂದ ಸಹಿ ಸಂಗ್ರಹಿಸಲಾಗಿದೆ. 83,600 ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು, 26,980 ಪೋಷಕರು, 19,327 ಆನೈಲೈನ್‌ ಮೂಲಕ ಹಾಗೂ 8,88,173 ವಿದ್ಯಾರ್ಥಿಗಳ ಸಹಿ ಸಂಗ್ರಹಿಸಲಾಗಿದೆ. ಈ ಸಹಿ ಸಂಗ್ರಹದ ಪೂರ್ಣ ಪ್ರತಿಗಳನ್ನು ನಿಯೋಗದಲ್ಲಿ ತೆರಳಿ ರಾಜ್ಯಪಾಲರಿಗೆ ಸಲ್ಲಿಸಲಾಗುತ್ತದೆ’ ಎಂದರು.

ರಾಜ್ಯ ಸರ್ಕಾರವು ರಾಜಕೀಯ ಧೋರಣೆಯಿಂದ ಎನ್‌ಇಪಿ ವಿರುದ್ಧದ ನಿಲುವು ತೆಗೆದುಕೊಂಡಿದ್ದು, ರಾಜ್ಯ ಶಿಕ್ಷಣ ನೀತಿ ರಚನೆಗೆ ಸಮಿತಿ ರಚಿಸಿದೆ. ಈ ಸಮಿತಿ ಮಾಹಿತಿ ಸಂಗ್ರಹಿಸುತ್ತಿರುವ ವಿಧಾನದ ಕುರಿತು ಶಿಕ್ಷಣ ಕ್ಷೇತ್ರದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ. ಕನ್ನಡದ ಶಿಕ್ಷಣ ತಜ್ಞರು ಇರುವಾಗ ಹೊರಗಿನವರನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಅಲ್ಲದೆ, ಎನ್‌ಇಪಿ ರಚಿಸುವಾಗ ಎಲ್ಲ ಸ್ತರಗಳ ಜನರೊಂದಿಗೆ ಚರ್ಚಿಸಿ, ಅಭಿಪ್ರಾಯ ಕ್ರೋಡೀಕರಿಸಿ ವರದಿ ಸಿದ್ಧಪಡಿಸಲಾಗಿತ್ತು. ಇಂತಹ ಪ್ರಯತ್ನ ರಾಜ್ಯ ಶಿಕ್ಷಣ ಸಮಿತಿಯಿಂದ ನಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಒಂದೊಮ್ಮೆ ಎಸ್‌ಇಪಿ ಜಾರಿಗೊಳಿಸಿದಲ್ಲಿ ಇದು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮಾತ್ರ ಅನ್ವಯವಾಗಬಹುದು. ಖಾಸಗಿ ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳು ಎನ್‌ಇಪಿ ಶಿಕ್ಷಣ ನೀಡಿದಲ್ಲಿ ಮುಂದಿನ ವರ್ಷಗಳಲ್ಲಿ ದಾಖಲಾತಿ ಕಡಿಮೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಸಂಚಾಲಕ ಪ್ರೊ. ರಾಜಶೇಖರ ಹೆಬ್ಬಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.