ADVERTISEMENT

ಕುಕ್ಕೆ: ದೇವರಿಗೆ ₹1 ಕೋಟಿ ಮೌಲ್ಯದ ಬೆಳ್ಳಿರಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:36 IST
Last Updated 23 ಮೇ 2025, 12:36 IST
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಶಿಲ್ಪಿ ರಾಜಾಗೋಪಾಲ ಆಚಾರ್ಯ ಕೋಟೇಶ್ವರ ಅವರು ಬೆಳ್ಳಿ ರಥದ ಮಾದರಿಯ ಚಿತ್ರ ನೀಡಿದರು
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಶಿಲ್ಪಿ ರಾಜಾಗೋಪಾಲ ಆಚಾರ್ಯ ಕೋಟೇಶ್ವರ ಅವರು ಬೆಳ್ಳಿ ರಥದ ಮಾದರಿಯ ಚಿತ್ರ ನೀಡಿದರು   

ಸುಬ್ರಹ್ಮಣ್ಯ: ಸುಳ್ಯದ ಶಿಲ್ಪಿ ದಿ.ಕುರುಂಜಿ ವೆಂಕಟ್ರಮಣ ಗೌಡ ಅವರ ಪುತ್ರ ಡಾ.ಕೆ.ವಿ.ರೇಣುಕಾಪ್ರಸಾದ್ ಕುರುಂಜಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇವಾ ರೂಪದಲ್ಲಿ ಬೆಳ್ಳಿ ರಥ ಸಮರ್ಪಿಸಲಿದ್ದಾರೆ. ಸುಮಾರು ₹ 1 ಕೋಟಿ ವೆಚ್ಚದಲ್ಲಿ ರಥ ನಿರ್ಮಾಣಗೊಳ್ಳಲಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ತಿಳಿಸಿದ್ದಾರೆ.

ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಬಗ್ಗೆ ನಡೆದ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳ್ಳಿರಥ ಸಮರ್ಪಣೆಗೆ ಅನುಮತಿ ನೀಡುವಂತೆ ದೇವಳಕ್ಕೆ ಪತ್ರದ ಮೂಲಕ ವಿನಂತಿಸಿದ್ದರು. ಈ ಸಂಬಂಧ ಆಡಳಿತ ಮಂಡಳಿ ಸಭೆ ನಡೆಸಿ ಅವರಿಗೆ ಅನುಮತಿ ನೀಡಲು ತೀರ್ಮಾನ ಕೈಗೊಂಡಿದೆ. ಇಲಾಖೆಯ ಪ್ರಕ್ರಿಯೆಗಳೂ ಶೀಘ್ರವೇ ನೆರವೇರಲಿದೆ ಎಂದರು.

ADVERTISEMENT

ಒಂದು ವಾರದ ಒಳಗೆ ಬೆಳ್ಳಿ ರಥ ನಿರ್ಮಾಣಕ್ಕೆ ದೇವಳದಲ್ಲಿ ಅವರು ಸಂಕಲ್ಪ ಮಾಡಲಿದ್ದಾರೆ. ಬಳಿಕ ರಥ ನಿರ್ಮಾಣಕಾರ್ಯ ಆರಂಭವಾಗಲಿದೆ. ರಥವನ್ನು ರಾಜಗೋಪಾಲ ಆಚಾರ್ಯ ಕೋಟೇಶ್ವರ ನಿರ್ಮಿಸಲಿದ್ದಾರೆ. ದೇವಳದ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಸಂಪ್ರದಾಯಕ್ಕೆ ಅನುಗುಣವಾಗಿ, ವಿವಿಧ ಕೆತ್ತನೆಗಳೊಂದಿಗೆ ರಥ ನಿರ್ಮಾಣವಾಗಲಿದೆ. ಈ ವರ್ಷ ನವೆಂಬರ್‌ನಲ್ಲಿ ನಡೆಯುವ ಚಂಪಾಷಷ್ಠಿ ಜಾತ್ರೋತ್ಸವದ ಮೊದಲು ಬೆಳ್ಳಿರಥ ಸಮರ್ಪಣೆಯಾಗಲಿದೆ. ಬೆಳ್ಳಿರಥದ ಪ್ರಥಮ ಉತ್ಸವ ನೆರವೇರಿದ ಬಳಿಕ ಭಕ್ತರಿಗೆ ಬೆಳ್ಳಿರಥದ ಹರಕೆ ಸೇವೆ ಸಮರ್ಪಿಸಲು ಅವಕಾಶ ಲಭಿಸಲಿದೆ ಎಂದರು.

ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಬಗ್ಗೆ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಶಿಲ್ಪಿಗಳು ಬೆಳ್ಳಿರಥದ ಮಾದರಿಯ ಚಿತ್ರವನ್ನು ಆಡಳಿತ ಮಂಡಳಿಗೆ ನೀಡಿದರು. 

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ದಾನಿಗಳ ಕಚೇರಿ ಮುಖ್ಯಸ್ಥರಾದ ದಿನೇಶ್ ಮಡ್ತಿಲ, ವಸಂತ ಕಿರಿಭಾಗ, ಮಾಸ್ಟರ್‌ಪ್ಲ್ಯಾನ್‌ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ದೇವಳದ ಎಂಜಿನಿಯರ್ ಉದಯ ಕುಮಾರ್, ಸ್ಥಳೀಯರಾದ ಅಭಿಲಾಷ್, ಕಿಶೋರ್ ಅರಂಪಾಡಿ, ಸಿಬ್ಬಂದಿ ಸರಸ್ವತಿ, ಕೃಷ್ಣಪ್ರಸಾದ್ ಕೆ.ಜಿ.ಭಟ್, ಸುಪ್ರಿತ್ ಕುಲ್ಕುಂದ ಸಭೆಯಲ್ಲಿ ಭಾಗವಹಿಸಿದ್ದರು.

ಬೆಳ್ಳಿರಥದ ಮಾದರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.