ADVERTISEMENT

ಏಕ ಬಳಕೆ ಪ್ಲಾಸ್ಟಿಕ್ ಬಳಕೆಗೆ ದಂಡ ಅನಿವಾರ್ಯ

ಕಾರ್ಯಾಗಾರದಲ್ಲಿ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 5:16 IST
Last Updated 12 ಜುಲೈ 2024, 5:16 IST
ಕಾರ್ಯಾಗಾರದಲ್ಲಿ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಮಾತನಾಡಿದರು. ಮಹೇಂದ್ರ ಡಿ.ಪಿ., ಬಿ.ಎನ್‌.ಪ್ರಕಾಶ್‌ ಹಾಗೂ ಸುಧೀರ್‌ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಮಾತನಾಡಿದರು. ಮಹೇಂದ್ರ ಡಿ.ಪಿ., ಬಿ.ಎನ್‌.ಪ್ರಕಾಶ್‌ ಹಾಗೂ ಸುಧೀರ್‌ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮಂಗಳೂರು: ‘ರಾಜ್ಯದಲ್ಲಿ 2016ರಿಂದಲೇ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿಯಲ್ಲಿದೆ. 2022ರ ಜುಲೈ 1ರಿಂದ ಕೇಂದ್ರ ಸರ್ಕಾರವೂ ಏಕಬಳಕೆ ಪ್ಲಾಸ್ಟಿಕ್‌ಗೆ ನಿಷೇಧ ಹೇರಿದೆ. ಸಾಕಷ್ಟು ತಿಳಿವಳಿಕೆ ಮೂಡಿಸಿದ ಬಳಿಕವೂ ಇವುಗಳ ಬಳಕೆ ಮುಂದುವರಿದಿದ್ದು, ಇನ್ನು ದಂಡನೆಗೆ ಕ್ರಮ ಅನಿವಾರ್ಯ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಹೇಳಿದರು.

ಏಕಬಳಕೆ ಪ್ಲಾಸ್ಟಿಕ್‌ ನಿಷೇಧದ ಕಟ್ಟುನಿಟ್ಟಿನ ಜಾರಿ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ಎಂಪ್ರಿ) ಸಹಯೋಗದಲ್ಲಿ ಇಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಏಕಬಳಕೆ ಪ್ಲಾಸ್ಟಿಕ್‌ನಿಂದ ಕಸದ ಸಮಸ್ಯೆ ಹೆಚ್ಚುತ್ತಿದೆ. ನಿಷೇಧಿತ ಪ್ಲಾಸ್ಟಿಕ್‌ ಚಮಚ, ಕೈಚೀಲದಂತಹ ಉತ್ಪನ್ನಗಳ ಬಳಕೆ ಅವ್ಯಾಹತವಾಗಿದೆ. ಸರ್ಕಾರವು, ಮಂಗಳೂರು, ಬೀದರ್‌, ಕಲಬುರ್ಗಿ, ಮೈಸೂರು ನಗರ ಹಾಗೂ ಧರ್ಮಸ್ಥಳ ಪಟ್ಟಣಗಳನ್ನು ‘ಪ್ಲಾಸ್ಟಿಕ್ ಕಸಮುಕ್ತ’ಎಂದು ಘೋಷಿಸಿದ್ದು, ಇದರ ಜಾರಿಗೆ ಎಲ್ಲರ ಸಹಕಾರ ಅಗತ್ಯ’ ಎಂದರು.

ADVERTISEMENT

‘ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳು ಯಾವುದೇ ಪರವಾನಗಿ ಪಡೆಯದ, ನೋಂದಣಿ ಆಗದ ಸಣ್ಣ ಘಟಕಗಳಲ್ಲಿ ತಯಾರಾಗುತ್ತಿವೆ. ಇವುಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ಕಷ್ಟ. ಇಂತಹ ಘಟಕಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ತಯಾರಿಸಲು ಕಚ್ಛಾವಸ್ತುವೇ ಸಿಗದಂತೆ ಮಾಡಲು ಕ್ರಮವಹಿಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ‘ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿಯಿಂದ ಆರಂಭದಲ್ಲಿ ಸಮಸ್ಯೆ ಆಗಬಹುದು. ಕ್ರಮೇಣ ಬದಲಾವಣೆ ಸಾಧ್ಯ. ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆ ಚೀಲ, ಕಾಗದದ ಚೀಲ ಸೆಣಬಿನ ಚೀಲ, ನೀರು ತುಂಬಲು ಪ್ಲಾಸ್ಟಿಕ್‌ ಬಾಟಲಿ ಬದಲು ಸ್ಟೀಲ್‌ ಬಾಟಲಿ ಬಳಕೆಯನ್ನು ರೂಢಿಸಿಕೊಳ್ಳಬೇಕು. ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧದ ಜಾರಿಗೆ ಸರ್ಕಾರೇತರ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೈಜೋಡಿಸಬೇಕು‘ ಎಂದರು.

ಪರಿಸರ ತಜ್ಞ ಬಿ.ಎನ್‌.ಪ್ರಕಾಶ್‌, ‘ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧ ಜಾರಿಗೆ 14 ಸದಸ್ಯರನ್ನು ಒಳಗೊಂಡ ಜಿಲ್ಲಾ‌ಮಟ್ಟದ ಸಮಿತಿ ಇದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಆಡಳಿತ ಯಂತ್ರದ ಗಮನಕ್ಕೆ ತರಲು ನೆರವಾಗುವ ಮೊಬೈಲ್‌ ಆ್ಯಪ್‌ಗಳೂ (ಸಿಂಗಲ್ ಯೂಸ್‌ ಪ್ಲಾಸ್ಟಿಕ್) ಲಭ್ಯ ಇವೆ’ ಎಂದರು.

ಪರಿಸರ ಅಧಿಕಾರಿ ಮಹೇಂದ್ರ ಡಿ.ಪಿ., ಪಾಲಿಕೆ ಅಧಿಕಾರಿಗಳು, ಪ್ಲಾಸ್ಟಿಕ್‌ ಉತ್ಪನ್ನ ತಯಾರಿ ಘಟಕಗಳ ಮಾಲೀಕರು, ಪರಿಸರ ಸ್ನೇಹಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

‘ಪ್ಲಾಸ್ಟಿಕ್‌ ಪೊಟ್ಟಣ ಮರಳಿಸಿ ಹಣ ಪಡೆಯಲು ಅವಕಾಶ’

‘ಕೇಂದ್ರ ಸರ್ಕಾರವು ಉತ್ಪಾದಕರ ವಿಸ್ತರಿತ ಹೊಣೆಗಾರಿಕೆ ನೀತಿ (ಇಪಿಆರ್‌) ಜಾರಿಗೊಳಿಸಿದೆ. ಇದರ ಪ್ರಕಾರ ಯಾವುದೇ ಉತ್ಪನ್ನದ ಪ್ಯಾಕೇಜಿಂಗ್‌ಗೆ ಪ್ಲಾಸ್ಟಿಕ್‌ ಬಳಸಿದರೆ ಅದರ ವಿಲೇವಾರಿಯೂ ಆ ಉತ್ಪನ್ನ ತಯಾರಿಸುವ ಸಂಸ್ಥೆಯದ್ದೇ ಆಗಿರುತ್ತದೆ. ಹಾಗಾಗಿ ಪ್ಯಾಕೇಜಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ ಪೊಟ್ಟಣಗಳನ್ನು ಮರಳಿಸಿ ಹಣ ನೀಡುವ ಅಥವಾ ರಿಯಾಯಿತಿ ಪಡೆಯುವ ಸೌಲಭ್ಯಗಳು ಗ್ರಾಹಕರಿಗೆ ಸಿಗಲಿವೆ’ ಎಂದು ಬಿ.ಎನ್‌.ಪ್ರಕಾಶ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.