ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯ
–ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ಮುಂದುವರಿದಿದ್ದು, ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ನಿರ್ವಹಿಸಿದ್ದ ಕೆಲವರನ್ನು ವಿಶೇಷ ತನಿಖಾ ತಂಡವು ವಿಚಾರಣೆಗೆ ಒಳಪಡಿಸಿದೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚಿನ ದಶಕಗಳಲ್ಲಿ ಗುರುತು ಪತ್ತೆಯಾಗದ ಶವಗಳನ್ನು ಹೂಳುವ ಕಾರ್ಯದಲ್ಲಿ ಭಾಗಿಯಾದ ಸ್ವಚ್ಛತಾ ಕಾರ್ಮಿಕರನ್ನು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕರೆಸಿ ಮಾಹಿತಿ ಕಲೆ ಹಾಕಲಾಗಿದೆ. ಗುರುತು ಪತ್ತೆಯಾಗದ ಮೃತದೇಹಗಳನ್ನು ನಿಯಮಬಾಹಿರವಾಗಿ ವಿಲೇ ಮಾಡಿರುವ ಆರೋಪಗಳ ಬಗ್ಗೆಯೂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (ಈಗಿನ ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರದೇಶವು ಈ ಹಿಂದೆ ಬೆಳ್ತಂಗಡಿ ಠಾಣೆಯ ವ್ಯಾಪ್ತಿಯಲ್ಲಿತ್ತು) ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡೂವರೆ ದಶಕಗಳಿಂದ ಈಚೆಗೆ ದಾಖಲಾಗಿರುವ ಅಸಹಜ ಸಾವು, ಕೊಲೆ ಪ್ರಕರಣಗಳ ದಾಖಲೆಗಳನ್ನು ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಅವುಗಳ ಅಧ್ಯಯನ ನಡೆಸುತ್ತಿದ್ದಾರೆ. ಸಾಕ್ಷಿ ದೂರುದಾರ ಇದುವರೆಗೆ ತೋರಿಸಿರುವ ಜಾಗಗಳಲ್ಲಿ ನಡೆದಿರುವ ಶೋಧ ಕಾರ್ಯದ ದಾಖಲೀಕರಣ ಪ್ರಕ್ರಿಯೆಯು ಮುಂದುವರಿದಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಬೆಳ್ತಂಗಡಿಗೆ ಬುಧವಾರ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ಮಾಡಿದರು.
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ ವಿಚಾರಣೆ
ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ, ಬೇರೊಂದು ಮೃತದೇಹ ಹೂತು ಹಾಕಿದ ಬಗ್ಗೆ ಎಸ್‌ಐಟಿಗೆ ದೂರು ನೀಡಿರುವ ಜಯಂತ್ ಟಿ. ಸೇರಿದಂತೆ ಆರೇಳು ಮಂದಿಯನ್ನು ಧರ್ಮಸ್ಥಳ ಪೊಲೀಸರು ಠಾಣೆಗೆ ಕರೆಸಿಕೊಂಡು ಬುಧವಾರ ವಿಚಾರಣೆಗೆ ಒಳಪಡಿಸಿದರು.
ಈಚೆಗೆ ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ಆ.6ರಂದು ಹಲ್ಲೆಗೊಳಗಾದ ಯೂಟ್ಯೂಬರ್‌ಗಳು ಉಜಿರೆಯ ಬೆನಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ‘ಆಸ್ಪತ್ರೆ ಬಳಿ ಈ ಕುರಿತು ಗಿರೀಶ್ ಮಟ್ಟೆಣ್ಣವರ ಅವರಲ್ಲಿ ಹೇಳಿಕೆ ನೀಡುವಂತೆ ಕೇಳಿದಾಗ ಅಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರು ಹಲ್ಲೆ ನಡೆಸಿದ್ದರು’ ಎಂದು ಆರೋಪಿಸಿ ಟಿ.ವಿ ಸುದ್ದಿ ವಾಹಿನಿಯ ವರದಿಗಾರ ಹರೀಶ್ ಆರ್. (34) ಎಂಬುವರು ದೂರು ನೀಡಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಧರ್ಮಸ್ಥಳದ ಪಾಂಗಾಳ ರಸ್ತೆ ಬಳಿ ಅಕ್ರಮ ಕೂಟ ಸೇರಿದ ಗಲಾಟೆ ಮಾಡಿದ ಆರೋಪ ಜಯಂತ್ ಟಿ. ಅವರ ಮೇಲಿದೆ.
ಪೂರ್ಣ ಪ್ರಮಾಣದ ತನಿಖೆಗೆ ಒತ್ತಾಯ
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಸಾಕ್ಷಿ ದೂರುದಾರ ಮಾಡಿರುವ ಆರೋಪಗಳ ಕುರಿತು ಎಲ್ಲಾ ಆಯಾಮಗಳಲ್ಲಿ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.
ಮಂಗಳೂರಲ್ಲಿ ಬುಧವಾರ ನಡೆದ ಸಮಾನ ಮನಸ್ಕ ಸಂಘಟನೆಗಳ ದುಂಡು ಮೇಜಿನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
‘ಎಸ್‌ಐಟಿ ಮೇಲೆ ಜನರಿಗೆ ವಿಶ್ವಾಸ ಇದೆ. ಬಿಜೆಪಿ ಹಾಗೂ ಇತರ ಪಟ್ಟಭದ್ರ ಹಿತಾಸಕ್ತಿಗಳು ಈ ತನಿಖೆಯನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಸಾಕ್ಷಿದಾರರನ್ನು, ಎಸ್‌ಐಟಿಗೆ ದೂರು ನೀಡಿದವರನ್ನು ಬೆದರಿಸುವ ಯತ್ನಗಳೂ ನಡೆದಿವೆ. ಇಂತಹ ಪಿತೂರಿ, ಒತ್ತಡಗಳಿಗೆ ಮಣಿಯದೇ ಸರ್ಕಾರವು ಎಸ್‌ಐಟಿಯು ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿವೆ.
‘1986ರಲ್ಲಿ ನಡೆದಿದ್ದ ಪದ್ಮಲತಾ ಕೊಲೆ ಪ್ರಕರಣ, 1979ರಲ್ಲಿ ನಡೆದಿದ್ದ ವೇದವಲ್ಲಿ ಹತ್ಯೆ, 2012ರಲ್ಲಿ ನಡೆದ ಮಾವುತ ನಾರಾಯಣ ಮತ್ತು ಆತನ ಸೋದರಿ ಯಮುನಾ ಹತ್ಯೆ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಸೌಜನ್ಯಾ ಪ್ರಕರಣದಲ್ಲೂ ಕೃತ್ಯ ನಡೆಸಿದವರು ಯಾರೆಂದು ಪತ್ತೆಯಾಗಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವು ಪ್ರಕರಣಗಳಲ್ಲಿ ಮೃತದೇಹಗಳ ವಿಲೇವಾರಿ ನಿಯಮ ಪ್ರಕಾರ ನಡೆದಿಲ್ಲ. ಈ ಬಗ್ಗೆಯೂ ಎಸ್ಐಟಿ ಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿವೆ.
‘ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ದಾಖಲೆಗಳಲ್ಲಿ ಅನನ್ಯಾ ಭಟ್ ಎಂಬ ಹೆಸರಿನವರು 2003ರಲ್ಲಿ ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದರ ವಿವರಗಳು ಲಭ್ಯವಿಲ್ಲ’ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮೂಲಗಳು ತಿಳಿಸಿವೆ.
ಅನನ್ಯಾ ಭಟ್ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿಯು 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿರುವ ಬಗ್ಗೆ ಯುವತಿಯ ತಾಯಿ ಎಂದು ಹೇಳಿಕೊಂಡ ಸುಜಾತಾ ಭಟ್ ಎಂಬುವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಜುಲೈ 15ರಂದು ದೂರು ನೀಡಿದ್ದರು.
‘ನನ್ನ ಮಗಳು ಅನನ್ಯಾ ಭಟ್ ಮಣಿಪಾಲದ ಕೆಎಂಸಿಯಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾಭ್ಯಾಸ ನಡೆಸುತ್ತಿದ್ದಳು. ಸಹಪಾಠಿಗಳ ಜೊತೆಗೆ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ತೆರಳಿದ್ದ ಆಕೆ 2003ರಲ್ಲಿ ನಾಪತ್ತೆಯಾಗಿದ್ದಳು’ ಎಂದು ಸುಜಾತಾ ಭಟ್ ಆರೋಪಿಸಿದ್ದರು.
ಎಸ್‌ಐಟಿಗೆ ಹಸ್ತಾಂತರ: ‘ಧರ್ಮಸ್ಥಳಕ್ಕೆ ಹೋಗಿದ್ದ ಮಗಳು ಅನನ್ಯಾ ಭಟ್ 2003ರಲ್ಲಿ ನಾಪತ್ತೆಯಾದ ಬಗ್ಗೆ ಸುಜಾತಾ ಭಟ್ ನೀಡಿದ್ದ ದೂರನ್ನು ಮುಂದಿನ ವಿಚಾರಣೆಗಾಗಿ ಆ.19ರಂದು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.