ಮಂಗಳೂರು: ‘ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತಿಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ನಡೆಸುತ್ತಿರುವ ತನಿಖೆ ಎಂದಿನಂತೆ ಮುಂದುವರಿಸಲಿದೆ. ಈ ಸಲುವಾಗಿ ಹೆಚ್ಚುವರಿ ಭದ್ರತೆ ಒದಗಿಸುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ತಿಳಿಸಿದರು.
ಧರ್ಮಸ್ಥಳದ ಪಾಂಗಾಳದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಘರ್ಷಣೆ ನಡೆದ ಬೆನ್ನಲ್ಲೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಧಾವಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಧರ್ಮಸ್ಥಳದಲ್ಲಿ ಬುಧವಾರ ನಡೆದ ಗುಂಪು ಘರ್ಷಣೆಯಿಂದ ಎಸ್‌ಐಟಿ ತನಿಖೆ ಮೇಲೆ ಯಾವುದೇ ಪರಿಣಾಮ ಉಂಟಾಗದು. ತನಿಖೆಯ ಭದ್ರತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಮೂರು ತುಕಡಿಗಳನ್ನು ಒದಗಿಸುತ್ತೇವೆ. ಈಗಾಗಲೇ ಈ ತುಕಡಿಗಳು ಹೊರಟಿವೆ’ ಎಂದು ಅವರು ಮಾಹಿತಿ ತಿಳಿಸಿದರು.
‘ಪಾಂಗಾಳದಲ್ಲಿ ಸಂಜೆ 5.30 ಗಂಟೆಗೆ ಧರ್ಮಸ್ಥಳ ಠಾಣೆಯ ವ್ಯಾಪ್ತಿಯಲ್ಲಿ ಯೂಟ್ಯೂಬರ್‌ಗಳಿಗೆ ಸ್ಥಳಿಯರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಬಂದಿತ್ತು. ‘ಸೌಜನ್ಯಪರ ಹೋರಾಟಗಾರರು’ ಎನ್ನಲಾದ ಯೂಟ್ಯೂಬರ್‌ಗಳ ಮೇಲೆ ಧರ್ಮಸ್ಥಳದ ಪರವಾಗಿ ಇರುವ ಸ್ಥಳೀಯರು ಹಾಗೂ ಹಲ್ಲೆ ನಡೆಸಿದ್ದಾರೆ. ತದನಂತರ ಸುವರ್ಣ ಸುದ್ದಿ ವಾಹಿನಿಯ ವರದಿಗಾರರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರುಗಳು ಬಂದಿವೆ. ಸುವರ್ಣ ವಾಹಿನಿಯವರ ಮೇಲೆ ಹಲ್ಲೆ ನಡೆಸಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಯೂಟ್ಯೂಬರ್ ಕಡೆಯವರು ಆರೋಪಿಸಿದ್ದಾರೆ’ ಎಂದರು.
‘ಮೂವರು ಯೂಟ್ಯೂಬರ್‌ಗಳು ಹಾಗೂ ಸುವರ್ಣ ಸುದ್ದಿ ವಾಹಿನಿ ವರದಿಗಾರ ಸೇರಿ ಒಟ್ಟು ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ದಾಖಲಾಗಿರುವ ಯಾರೂ ಗಂಭೀರದ ಗಾಯದ ಗುರುತನ್ನು ಹೊಂದಿಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲೆ ನಡೆದ ವಿಡಿಯೊ ಇನ್ನು ಸಿಕ್ಕಿಲ್ಲ. ವಾಹನದ ಗಾಜು ಹಾನಿಗೊಂಡ ವಿಡಿಯೊ ಸಿಕ್ಕಿದೆ. ಎರಡೂ ಕಡೆಯವರ ದೂರುಗಳನ್ನೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.
‘ಠಾಣೆಯ ಬಳಿ ಧರಣಿ ನಡೆಸುವುದು ಸೂಕ್ತ ಅಲ್ಲ. ಅದರ ಬದಲು ಲಿಖಿತ ದೂರು ನೀಡಬಹುದು. ಯಾರೂ ತಮ್ಮ ತಮ್ಮ ನಡುವೆ ಗಲಾಟೆ ಮಾಡಿಕೊಳ್ಳುವಂತಿಲ್ಲ’ ಎಂದು ಎರಡೂ ಕಡೆಯವರಿಗೂ ತಿಳಿಸಿದ್ದೇವೆ. ಎಚ್ಚರಿಕೆಯನ್ನೂ ನೀಡಿದ್ದೇವೆ’ ಎಂದರು.
‘ಎಸ್‌ಐಟಿ ತಂಡದ ಧರ್ಮಸ್ಥಳದಲ್ಲಿ ಶೋಧಕಾರ್ಯವನ್ನು ಮುಗಿಸಿ ತೆರಳಿದ ಬಳಿಕ ಘರ್ಷಣೆ ನಡೆದಿದೆ. ಹಾಗಾಗಿ ಸ್ಥಳಕ್ಕೆ ಪೊಲೀಸರು ತಲುಪುವಾಗ ಸ್ವಲ್ಪ ತಡವಾಗಿದೆ. ಪೊಲೀಸರ ಮೇಲೆ ಹಲ್ಲೆ ಆಗಿಲ್ಲ. ಪೊಲೀಸ್ ವಾಹನವನ್ನು ಹಾನಿಗೊಳಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಮಾನಹಾನಿಗೆ ಸಂಬಂಧಿಸಿದ ಕೆಲ ಪ್ರಕರಣಗಳ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಮಾನಹಾನಿ ಆಗಿದೆ ಎಂದು ಯಾರಿಗದರೂ ಅನಿಸಿದರೆ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಯಾವುದೇ ಅಪರಾಧ ಕೃತ್ಯಗಳು ನಡೆದರೆ, ನಾದು ದೂರು ದಾಖಲಿಸಿಕೊಂಡು ಕ್ರಮ ವಹಿಸುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಮಾಹಿತಿ ಹಂಚಿಕೊಂಡ ಬಗ್ಗೆ ದೂರು ಬಂದರೂ ಕ್ರಮ ವಹಿಸುತ್ತೇವೆ’ ಎಂದರು.
‘ಯೂಟ್ಯೂಬರ್‌ಗಳ ನಿಲುವನ್ನು ಅವರು ಹೇಳುತ್ತಿದ್ದಾರೆ. ಯಾವುದು ನಿಜ ಎಂಬುದು ಎಸ್‌ಐಟಿಗೆ ಗೊತ್ತು. ಎಸ್‌ಐಟಿಯವರು ಅಧಿಕೃತ ಹೇಳಿಕೆ ನೀಡುವವರೆಗೆ ಯಾರೂ ಊಹಾ ಪೋಹಗಳನ್ನು ಹರಡುವುದು ಬೇಡ. ಸೂಕ್ತ ಸಮಯದಲ್ಲಿ ಎಸ್‌ಐಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಇಂತಹ ಊಹಾಪೋಹಗಳಿಗೆ ತನಿಖೆಗೆ ಡ್ಡಿ ಉಂಟಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.