ADVERTISEMENT

ಧರ್ಮಸ್ಥಳ ಪ್ರಕರಣ: ಎರಡನೇ ದಿನವೂ ಎಸ್‌ಐಟಿಯಿಂದ 7 ಗಂಟೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 17:55 IST
Last Updated 27 ಜುಲೈ 2025, 17:55 IST
ಸಾಕ್ಷಿ ದೂರುದಾರ (ಎಡ ತುದಿ) ಮುಖಗವಸು ಧರಿಸಿ ಮಂಗಳೂರಿನಲ್ಲಿ ಎಸ್‌ಐಟಿ  ಎದುರು ಭಾನುವಾರ ಮೂವರು ವಕೀಲರ ಜೊತೆಗೆ ಹಾಜರಾದರು: ಪ್ರಜಾವಾಣಿ ಚಿತ್ರ
ಸಾಕ್ಷಿ ದೂರುದಾರ (ಎಡ ತುದಿ) ಮುಖಗವಸು ಧರಿಸಿ ಮಂಗಳೂರಿನಲ್ಲಿ ಎಸ್‌ಐಟಿ  ಎದುರು ಭಾನುವಾರ ಮೂವರು ವಕೀಲರ ಜೊತೆಗೆ ಹಾಜರಾದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಕುರಿತು ದಾಖಲಾದ ಪ್ರಕರಣದ (ಸಂಖ್ಯೆ 39/2025 ) ಸಾಕ್ಷಿ ದೂರುದಾರ ಇಲ್ಲಿ ವಿಶೇಷ ತನಿಖಾ‌ ತಂಡದ (ಎಸ್ಐಟಿ) ಅಧಿಕಾರಿಗಳ ಮುಂದೆ ಭಾನುವಾರವೂ ಹಾಜರಾಗಿ ಹೇಳಿಕೆ ನೀಡಿದರು.

ಖಾಸಗಿ ಕಾರೊಂದರಲ್ಲಿ ಮೂವರು ವಕೀಲರೊಂದಿಗೆ ಇಲ್ಲಿನ ಮಲ್ಲಿಕಟ್ಟೆಯ ಪ್ರವಾಸಿ ಬಂಗಲೆಗೆ ಬೆಳಿಗ್ಗೆ 10.15ಕ್ಕೆ ಮುಖಗವಸು ಧರಿಸಿಕೊಂಡೇ ಬಂದ ಸಾಕ್ಷಿ ದೂರುದಾರ ಸಂಜೆ 6.22ರವರೆಗೂ ಅಲ್ಲೇ ಇದ್ದು ಎಸ್ಐಟಿ ತಂಡದ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪೊಲೀಸ್‌ ಅಧಿಕಾರಿಗಳು ಆತನಿಂದ ಹೇಳಿಕೆ ದಾಖಲಿಸಿಕೊಳ್ಳುವಾಗ ಎಸ್‌ಐಟಿ ಮುಖ್ಯಸ್ಥರಾಗಿರುವ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಖುದ್ದು ಹಾಜರಿದ್ದರು. ಸಂಜೆ 5 ಗಂಟೆವರೆಗೂ ಪ್ರವಾಸಿ ಬಂಗಲೆಯಲ್ಲೇ ಇದ್ದ ಮೊಹಾಂತಿ ಮುಂದಿನ ತನಿಖೆಯ ಬಗ್ಗೆ ತಂಡದ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.   

ಎಸ್ಐಟಿಯಲ್ಲಿರುವ ಪೊಲೀಸ್‌ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್‌. ಅನುಚೇತ್‌, ಆಂತರಿಕ ಭದ್ರತಾ ವಿಭಾಗದ ಎಸ್‌.ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಎ. ಸೈಮನ್ ಅವರು ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ಹಾಜರಿದ್ದರು. 

ADVERTISEMENT
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಕುರಿತು ದಾಖಲಾದ ಪ್ರಕರಣ ಸಂಬಂಧ ಸಾಕ್ಷಿ ದೂರುದಾರನಿಂದ ಹೇಳಿಕೆ ದಾಖಲಿಸಿಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳು ನಿರ್ಗಮಿಸಿದರು: ಪ್ರಜಾವಾಣಿ ಚಿತ್ರ

ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್‌ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಅವರು ಪ್ರಣವ್ ಮೊಹಾಂತಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. 

ಸಾಕ್ಷಿ ದೂರುದಾರ ಹಾಗೂ ಆತನ ಜೊತೆಗೆ ಬಂದಿದ್ದ ವಕೀಲರು ಬಂದ ಕಾರಿನಲ್ಲೇ ಅಜ್ಞಾತ ಸ್ಥಳಕ್ಕೆ ಸಂಜೆ ನಿರ್ಗಮಿಸಿದರು. ಅವರು ಎಸ್‌ಐಟಿ ವಿಚಾರಣೆಗೆ ಬಗ್ಗೆ ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದರು. ಎಸ್‌ಐಟಿ ತಂಡದ ಅಧಿಕಾರಿಗಳೂ ಈ ಬಗ್ಗೆ ಹಂಚಿಕೊಳ್ಳಲಿಲ್ಲ.

ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿ ಅಧಿಕಾರಿಗಳ ತಂಡವು ಬೆಳ್ತಂಗಡಿಯಲ್ಲಿ ಸಜ್ಜುಗೊಳ್ಳುತ್ತಿರುವ ಎಸ್‌ಐಟಿ ಕಚೇರಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು 

ಬೆಳ್ತಂಗಡಿಗೆ ಪ್ರಣವ್ ಮೊಹಾಂತಿ ಭೇಟಿ

ಬೆಳ್ತಂಗಡಿ ಪೊಲೀಸ್‌ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಸಜ್ಜುಗೊಳಿಸಿರುವ ಎಸ್ಐಟಿ ಕಚೇರಿಗೆ ಪ್ರಣವ್ ಮೊಹಾಂತಿ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಕಚೇರಿಯ ಕಾರ್ಯನಿರ್ವಹಣೆ ಸಲುವಾಗಿ ಕಲ್ಪಿಸಬೇಕಾದ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಎಸ್‌ಐಟಿಯ ಅಧಿಕಾರಿಗಳಾದ ಅನುಚೇತ್‌ ಹಾಗೂ ಸಿ.ಎ. ಸೈಮನ್ ಅವರಿಂದ ಮಾಹಿತಿ ಪಡೆದರು. ಸಾಕ್ಷಿ ದೂರುದಾರ ಮಾಹಿತಿ ನೀಡಿದ ಪ್ರಕಾರ ಹೂತು ಹಾಕಿದ್ದಾನೆ ಎನ್ನಲಾದ ಮೃತದೇಹಗಳನ್ನು ಮತ್ತೆ ವಶಕ್ಕೆ ಪಡೆಯುವ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಬಂದೋಬಸ್ತ್‌ ಬಗ್ಗೆಯೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.