ಉಜಿರೆ: ‘ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು, ಎಸ್‌ಐಟಿ ತನಿಖೆಯಿಂದ ಹಲವು ಸತ್ಯಾಂಶಗಳು ನ್ಯಾಯಯುತವಾಗಿ, ನಮಗೆ ಪೂರಕವಾಗಿ ಪ್ರಕಟವಾಗುತ್ತಿದೆ. ಈ ಮೂಲಕ ಸತ್ಯದ ಸಾಕ್ಷಾತ್ಕಾರವಾಗುತ್ತಿರುವುದು ಸಂತಸದಾಯಕವಾಗಿದೆ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯದವರು ಬೆಳ್ತಂಗಡಿ ತಾಲ್ಲೂಕು ಜೈನಸಮಾಜದ ಆಶ್ರಯದಲ್ಲಿ ಧರ್ಮಸ್ಥಳಕ್ಕೆ ವಾಹನ ಜಾಥಾದಲ್ಲಿ ಬಂದಾಗ ಅವರನ್ನು ಉದ್ದೇಶಿಸಿ ಮಾತನಾಡಿದರು.
‘ಧರ್ಮಸ್ಥಳದಲ್ಲಿ ಹುಟ್ಟಿದ ನಮ್ಮ ಕುಟುಂಬಸ್ಥರೆಲ್ಲರೂ ಭಾಗ್ಯವಂತರು. ಭಗವಾನ್ ಚಂದ್ರನಾಥ ಸ್ವಾಮಿ, ಮಂಜುನಾಥ ಸ್ವಾಮಿ, ಅಣ್ಣಪ್ಪಸ್ವಾಮಿ ಹಾಗೂ ಧರ್ಮದೇವತೆಗಳ ಸೇವೆ ಮಾಡುವ ಸುವರ್ಣಾವಕಾಶ ದೊರೆತಿರುವುದು ಬದುಕಿನ ಸೌಭಾಗ್ಯವಾಗಿದೆ’ ಎಂದರು.
ವಾಹನ ಜಾಥಾ: ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದ ಮೂರು ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಹೆಗ್ಗಡೆ ಮತ್ತು ಕುಟುಂಬಸ್ಥರಿಗೆ ಬಸದಿಯ ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರ ಮತ್ತು ಬಳಗದವರು ನೀಡಿದರು.
ಬಳಿಕ ವಿಶ್ವಶಾಂತಿಗಾಗಿ 9ಬಾರಿ ಪಂಚನಮಸ್ಕಾರ ಮಂತ್ರದ ಸಾಮೂಹಿಕ ಪಠಣ ಮಾಡಲಾಯಿತು.
ನಂತರ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಗೆ ತೆರಳಿ ಪಂಚನಮಸ್ಕಾರ ಮಂತ್ರವನ್ನು ಪಠಿಸಿದರು.
ಹೇಮಾವತಿ ವೀ.ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ.ನೀತಾ ರಾಜೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್, ಡಿ.ಶ್ರೇಯಸ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.