ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಮಂಗಳೂರು: ಉಜಿರೆ ಗ್ರಾಮದ ಬಿಲ್ಲರೋಡಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ 2018ರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದ ಭಾಸ್ಕರ ಬಡೆಕೊಟ್ಟು ಎಂಬುವರು ವಿಶೇಷ ತನಿಖಾ ತಂಡಕ್ಕೆ ಬುಧವಾರ ದೂರು ನೀಡಿದ್ದಾರೆ.
ಈ ಬಗ್ಗೆ ಹಿಂಬರಹ ನೀಡಿರುವ ಎಸ್‌ಐಟಿ ಸಹಾಯಕ ತನಿಖಾಧಿಕಾರಿ, ಈ ಕುರಿತ ದೂರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.
‘ಉಜಿರೆ ಬಿಲ್ಲರೋಡಿ ಎಂಬಲ್ಲಿ ಸೋಂಪ ಯಾನೆ ಬಾಲಕೃಷ್ಣ ಗೌಡ ಎಂಬುವರು ನಾಪತ್ತೆಯಾಗಿದ್ದರು. ಆ ಬಗ್ಗೆ ಅವರ ಕುಟುಂಬದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಅವರು ಕೊಲೆಯಾಗಿರಬಹುದು ಎಂದು ಊರವರಿಗೆ ಸಂಶಯ ಇತ್ತು. ಅದೇ ವೇಳೆ ಸರ್ಕಾರಿ ಜಾಗದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಬಾಲಕೃಷ್ಣ ಗೌಡ ನಾಪತ್ತೆಯಾದ ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದೆವು.
ಆದರೆ, ಈ ಬಗ್ಗೆ ಸಮರ್ಪಕ ತನಿಖೆ ನಡೆದಿಲ್ಲ. ಸಂಶಯಾಸ್ಪದ ಸಾವುಗಳ ಬಗ್ಗೆ ತಿಳಿಸುವಂತೆ ಎಸ್‌ಐಟಿಯವರು ಕೋರಿದ್ದರು. ಹಾಗಾಗಿ ಎಸ್‌ಐಟಿ ತನಿಖಾಧಿಕಾರಿಗೆ ಈ ಬಗ್ಗೆ ದೂರು ನೀಡಿ ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿದ್ದೇವೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಾರ ಹೆಸರನ್ನೂ ಬಹಿರಂಗಪಡಿಸಲು ಬಯಸುವುದಿಲ್ಲ’ ಎಂದು ಭಾಸ್ಕರ ಬಡೆಕೊಟ್ಟು ಸುದ್ದಿಗಾರರಿಗೆ ತಿಳಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಪ್ರಭಾವಿಯೊಬ್ಬರ ವಿರುದ್ಧ ಇವರು ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.