
ತೋಳ ಹಾವು
ಮಂಗಳೂರು: ಮಾನವ– ಪ್ರಾಣಿ ಸಂಘರ್ಷದಲ್ಲಿ ಅತಿಹೆಚ್ಚು ಸಂಘರ್ಷಕ್ಕೆ ಒಳಗಾಗುವ ಹಾವುಗಳ ರಕ್ಷಣೆ, ಹಾವು ಕಡಿತದ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಸಮುದಾಯ ಆಧಾರಿತ ಕಾರ್ಯಕ್ರಮ ರೂಪಿಸಿದೆ.
ಶಾಲಾ– ಕಾಲೇಜು ಮಕ್ಕಳು, ಅರಣ್ಯವಾಸಿಗಳು, ಗ್ರಾಮ ಪಂಚಾಯಿತಿ ಹಂತದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಇನ್ನೆರಡು ತಿಂಗಳುಗಳಲ್ಲಿ ಆರಂಭವಾಗಲಿದೆ. ಒಂದು ವರ್ಷದಲ್ಲಿ ಕನಿಷ್ಠ 3 ಸಾವಿರ ಜನರನ್ನು ತಲುಪಲು ಮಂಡಳಿ ಮುಂದಾಗಿದೆ.
‘ಹಾವು ಕಡಿದ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಹಾವು ಕಡಿದ ಜಾಗದಲ್ಲಿ ಬಿಗಿಯಾಗಿ ಹಗ್ಗ ಕಟ್ಟಬೇಕು, ಕಡಿತಕ್ಕೊಳಗಾದ ಜಾಗವನ್ನು ತುಂಡರಿಸಬೇಕು, ರಕ್ತ ಹೊರತೆಗೆಯಬೇಕು ಇಂತಹ ಅನೇಕ ಸಂಗತಿಗಳು ಜನರ ನಡುವೆ ಹರಿದಾಡುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಇದು ತಪ್ಪು ಚಿಕಿತ್ಸಾ ಕ್ರಮ. ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಮಲಗಿಸಿ, ಕೈಯಲ್ಲಿರುವ ಉಂಗುರ, ಬಳೆಯಂತಹ ವಸ್ತುಗಳನ್ನು ತೆಗೆದು ಸಮಾಧಾನಪಡಿಸಿ ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯಬೇಕು’ ಎನ್ನುತ್ತಾರೆ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ.
ಸರ್ಕಾರಿ ಶಾಲೆಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮ ಆರಂಭಿಸಿದ್ದು, ಪ್ರಾಥಮಿಕ, ಪ್ರೌಢ, ಕಾಲೇಜು ಮಕ್ಕಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಮಕ್ಕಳ ಮೂಲಕ ಪಾಲಕರನ್ನು ತಲುಪುವ ಜೊತೆಗೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನರೊಂದಿಗೆ ಚರ್ಚಿಸಿ, ತಿಳಿವಳಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಅನುಷ್ಠಾನ ಹೇಗೆ?
ಭಾರತದಲ್ಲಿ ವರ್ಷಕ್ಕೆ ಸರಾಸರಿ 10 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ. ಅಂದಾಜು 60 ಸಾವಿರ ಜನರು ಮೃತಪಟ್ಟರೆ, 1.5 ಲಕ್ಷ ಜನರು ಅಂಗವಿಕಲತೆಗೆ ಒಳಗಾಗುತ್ತಾರೆ. ವರದಿಯಾಗದ ಪ್ರಕರಣಗಳೂ ಬಹಳಷ್ಟು ಇರುತ್ತವೆ. ಗ್ರಾಮಸ್ಥರ ಜೊತೆ ಬೆರೆತು ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಮೇಲೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಮಂಡಳಿಯ ನಿಸರ್ಗ ತಜ್ಞ ರಾಹುಲ್ ಆರಾಧ್ಯ.
ಪ್ರಾಥಮಿಕ ಶಾಲೆ ಮಕ್ಕಳಿಗೆ ಚಟುವಟಿಕೆ ಆಧರಿಸಿ ಕಾರ್ಯಕ್ರಮ, ರೈತರಿಗೆ ‘ವಿಲೇಜ್ ಪನೋರಮಾ’, ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಹೀಗೆ ಸಮುದಾಯ ಆಧಾರಿತ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮಂಡಳಿಯ ಅಡಿಯಲ್ಲಿ ರಾಜ್ಯದ ವಿವಿಧ ಭಾಗಗಳ 500 ಸ್ವಯಂ ಸೇವಕರು ಇದ್ದಾರೆ. ಅವರಿಗೆ ಪರಿಸರ ತರಬೇತಿ ನೀಡಿ ಅಣಿಗೊಳಿಸಲಾಗಿದ್ದು, ಅವರ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.