ಮಂಗಳೂರು: ರಾಜ್ಯ ಸರ್ಕಾರವು ಯಾವುದೇ ಪೂರ್ವಸಿದ್ಧತೆ ಇಲ್ಲದೆ ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಮುಂದಾಗಿದ್ದು, ಗೊಂದಲಕ್ಕೆ ಕಾರಣವಾಗಿರುವ ಈ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಒತ್ತಾಯಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ ಮನೆಗಳಿಗೆ ಸ್ಟಿಕರ್ ಅಂಟಿಸಲು ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಶುರು ಮಾಡುವ ಪೂರ್ವದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಮಾಹಿತಿ ನೀಡಬೇಕಿತ್ತು. ಯಾವುದೇ ಮಾಹಿತಿ ಇಲ್ಲದೆ ಏಕಾಏಕಿ ಸ್ಟಿಕರ್ ಅಂಟಿಸುತ್ತಿರುವುದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಬದಲಾಗಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಈ ಬಗ್ಗೆ ಬುಧವಾರ ಸಭೆ ನಡೆಸಿದ್ದಾರೆ. ಉಸ್ತುವಾರಿ ಸಚಿವರು ಮಾಡುವ ಕೆಲಸವನ್ನು ಸ್ಪೀಕರ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಖಾದರ್ ಉಸ್ತುವಾರಿ ಸಚಿವರೇ’ ಎಂದು ಪ್ರಶ್ನಿಸಿದರು.
₹165 ಕೋಟಿ ವೆಚ್ಚ ಮಾಡಿ ಕಾಂತರಾಜ್ ಆಯೋಗದ ನೇತೃತ್ವದಲ್ಲಿ ನಡೆಸಿರುವ ಸಮೀಕ್ಷೆ ಬಗ್ಗೆ ಕಾಂಗ್ರೆಸ್‌ನಲ್ಲೇ ಅನೇಕರಿಗೆ ನಂಬಿಕೆ ಇಲ್ಲ. ಈಗ ಮತ್ತೆ, ತರಾತುರಿಯಲ್ಲಿ ಸಮೀಕ್ಷೆಗೆ ಸಿದ್ಧತೆ ನಡೆದಿದೆ. ಹಿಂದೂಗಳ ಹಬ್ಬ ದಸರಾ ವೇಳೆಯಲ್ಲೇ ಅದೂ, ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸುವ ತುರ್ತು ಏನಿದೆ? ಸಮುದಾಯಗಳ ನಡುವೆ ಅಪನಂಬಿಕೆ ಸೃಷ್ಟಿಸುವ ಬದಲಾಗಿ, ಲೋಪ ಸರಿಪಡಿಸಿಕೊಂಡು, ಜನಜಾಗೃತಿ ನಡೆಸಿ, ಮುಂದಿನ ಬೇಸಿಗೆಯ ಅವಧಿಯಲ್ಲಿ ಸಮೀಕ್ಷೆ ನಡೆಸುವುದು ಸೂಕ್ತ ಎಂದರು.
‘ಸಾಮಾಜಿಕ ಸಮೀಕ್ಷೆಯಂತಹ ಗಂಭೀರ ವಿಷಯದ ಬಗ್ಗೆ ಸಭೆ ನಡೆಸುವ ಒಂದು ವಾರದ ಮೊದಲು ಸಂಬಂಧಪಟ್ಟ ದಾಖಲೆ ಒದಗಿಸಬೇಕಿತ್ತು. ಆದರೆ, ಬುಧವಾರದ ಸಭೆಯ ಬಗ್ಗೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಿಂದ ನನಗೆ ದೂರವಾಣಿ ಕರೆ ಬಂದಿದೆ. ಜಿಲ್ಲೆಯ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾಗಿ ಸ್ಪೀಕರ್ ಅವರೇ ಉತ್ತರಿಸುವ ಮೂಲಕ ಸ್ಪೀಕರ್ ಸ್ಥಾನದ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.
ಬಿಜೆಪಿ ಪ್ರಮುಖರಾದ ಪೂಜಾ ಪೈ, ನಿತಿನ್ ಕುಮಾರ್, ರವಿಶಂಕರ್ ಮಿಜಾರು, ಸಂಜಯ ಪ್ರಭು, ಪ್ರೇಮಾನಂದ ಶೆಟ್ಟಿ, ಮೋಹನ್ ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.