
ಪುತ್ತೂರು: ಮಕ್ಕಳಲ್ಲಿ ಮತ್ತು ಯುವಕರಲ್ಲಿ ಸಾಮಾಜಿಕ ಪರಿವರ್ತನೆ ತರುವ ಅಗತ್ಯವಿದೆ. ಸಮಾಜ ಬೆಳಗಬೇಕಾದರೆ ಮನ ಮತ್ತು ಮನಸ್ಸಿನಿಂದ ಪರಿವರ್ತನೆ ತರುವುದು ಮುಖ್ಯ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಪುತ್ತೂರು ತಾಲ್ಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನೇತೃತ್ವದಲ್ಲಿ ಯುವ ಗೌಡ ಸಂಘ, ಗೌಡ ಮಹಿಳಾ ಸಂಘ ಮತ್ತು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸಹಯೋಗದಲ್ಲಿ ಇಲ್ಲಿನ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಸತ್ಯನಾರಾಯಣ ಪೂಜೆ, ಸಂಘದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮತ್ತು 10 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಯುವ ಸಮುದಾಯ ದೇಶದ ಶಕ್ತಿ. ಗೌಡ ಸಮಾಜಕ್ಕೆ ಭವಿಷ್ಯವಿದೆ. ಸಮಾಜದ ಅಸ್ತಿತ್ವ ಉಳಿಸುವ ದೃಷ್ಟಿಯಿಂದ ಸಮುದಾಯದ ಪ್ರತಿಯೊಬ್ಬರೂ ಸ್ವಾಭಿಮಾನಿ ಸ್ವಾವಲಂಬಿಯಾಗಿ ಸಂಘಕ್ಕೆ ಸೇರಬೇಕು. ನಮ್ಮ ಸಂಘ ಇರುವುದು ಇನ್ನೊಂದು ಸಮಾಜದ ಮೇಲೆ ಸವಾರಿ ಮಾಡಲು ಅಲ್ಲ. ಇನ್ನೊಂದು ಸಮಾಜದಿಂದ ಗೌರವ ಸಿಗುವ ಕೆಲಸ ಮಾಡಬೇಕು ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ನಿರ್ಗಮನ ಅಧ್ಯಕ್ಷ ರವಿ ಮುಂಗ್ಲಿಮನೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಅಧ್ಯಕ್ಷ ಸುಂದರ ಗೌಡ ನಡುಬೈಲು, ಒಕ್ಕಲಿಗ ಗೌಡ ಮಹಿಳಾ ಸಂಘದ ನಿರ್ಗಮನ ಅಧ್ಯಕ್ಷೆ ವಾರಿಜ ಬೆಳಿಯಪ್ಪ ಗೌಡ, ನೂತನ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಪಾಣತ್ತಿಲ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಲಾಯಿತು.
ಗೌಡ ಸಂಘದ ಪ್ರಮುಖರಾದ ವಕೀಲ ಚಿದಾನಂದ ಬೈಲಾಡಿ, ಮನೋಹರ್ ಡಿ.ವಿ., ದಿವ್ಯಪ್ರಸಾದ್, ಅಮರನಾಥ ಗೌಡ, ದಯಾನಂದ ಕೆ.ಎಸ್., ಮೀನಾಕ್ಷಿ ಡಿ.ಗೌಡ, ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಪುರುಷೋತ್ತಮ ಮುಂಗ್ಲಿಮನೆ, ಶಿವರಾಮ ಮತಾವು, ಸುರೇಶ್ ಗೌಡ, ಬಂಟ್ವಾಳ ತಾಲ್ಲೂಕು ಗೌಡ ಸಂಘದ ಅಧ್ಯಕ್ಷ ಸಿ.ಟಿ.ಗೌಡ ಭಾಗವಹಿಸಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ವೀರಮಂಗಲ, ಉದಯ ಕರ್ಮಲ, ಮಲ್ಲಿಕಾ ಎಂ. ನಿರೂಪಿಸಿದರು
ಸಾಧನ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಕ್ಕಲಿಗ ಸಮುದಾಯ ಪತ್ತಿನ ಮಾಜಿ ನಿರ್ದೇಶಕ ಶಿವರಾಮ ಗೌಡ ಇಡ್ಯಪೆ (ಸಹಕಾರ ಕ್ಷೇತ್ರ), ದ.ಕ.ಜಿಲ್ಲಾ ಪಂಚಾಯಿತಿ ಪ್ರಥಮ ಉಪಾಧ್ಯಕ್ಷೆ, ಮಹಿಳಾ ಗೌಡ ಸಂಘದ ಪ್ರಥಮ ಅಧ್ಯಕ್ಷೆ ರತ್ನಾವತಿ ಜಿ.ವಿ.ಗೌಡ (ಸಾಮಾಜಿಕ), ಸಚಿನ್ ಸುಂದರ ಗೌಡ ಉಪ್ಪಿನಂಗಡಿ (ಉದ್ಯಮ), ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. (ಸಾಮಾಜಿಕ), ಪುತ್ತೂರು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್ (ಆರೋಗ್ಯ), ಎವಿಜಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಎ.ವಿ.ನಾರಾಯಣ (ಶಿಕ್ಷಣ), ಸುಳ್ಯ ಕೆವಿಜಿ ಸಹಾಯಕ ಉಪನ್ಯಾಸಕಿ ಡಾ.ಧನ್ಯ ಬೈಲಾಡಿ (ವೈದ್ಯಕೀಯ), ಸಿಂಚನ ಊರುಬೈಲು (ಪತ್ರಿಕೋದ್ಯಮ), ಶಮಿಕಾ ಹಿರೇಬಂಡಾಡಿ (ವಿಶೇಷ ಪ್ರತಿಭೆ) ಅವರಿಗೆ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.