ADVERTISEMENT

ವಕೀಲರಿಂದಾಗಿ ಸಮಾಜಕ್ಕೆ ಚಲನಶಕ್ತಿ: ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್

‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ವಿಶೇಷ ಕಾನೂನು ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:07 IST
Last Updated 26 ನವೆಂಬರ್ 2022, 5:07 IST
ಪುತ್ತೂರು ನ್ಯಾಯಾಲಯ ಸಂಕೀರ್ಣದ ಪರಾಶರ ಸಭಾಭವನದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ವಿಶೇಷ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಉದ್ಘಾಟಿಸಿದರು. ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ನರಗುಂದ ಎಂ.ಡಿ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಶಿಕಾಂತ್, ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಓಂಕಾರಪ್ಪ ಇದ್ದರು.
ಪುತ್ತೂರು ನ್ಯಾಯಾಲಯ ಸಂಕೀರ್ಣದ ಪರಾಶರ ಸಭಾಭವನದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ವಿಶೇಷ ಕಾನೂನು ಕಾರ್ಯಾಗಾರವನ್ನು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಉದ್ಘಾಟಿಸಿದರು. ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ನರಗುಂದ ಎಂ.ಡಿ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಶಿಕಾಂತ್, ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಓಂಕಾರಪ್ಪ ಇದ್ದರು.   

ಪುತ್ತೂರು: ‘ವಕೀಲರಿಗಿರುವ ಸ್ವಾತಂತ್ರ್ಯ ನ್ಯಾಯಾಧೀಶರಿಗಿಲ್ಲ. ವಕೀಲರು ಇಲ್ಲದಿದ್ದಲ್ಲಿ ನಮ್ಮ ಸಂವಿಧಾನ, ಕಾನೂನು ಪ್ರಕ್ರಿಯೆಗಳು ಉಳಿಯಲು ಸಾಧ್ಯವಿಲ್ಲ. ವಕೀಲರಿಂದಾಗಿ ಸಮಾಜಕ್ಕೆ ಚಲನ ಶಕ್ತಿ ಬರುತ್ತದೆ’ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹೇಳಿದರು.

ಪುತ್ತೂರು ವಕೀಲರ ಸಂಘ ಮತ್ತು ಪುತ್ತೂರು ತಾಲ್ಲೂಕು ಕಾನೂನು ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ಶುಕ್ರವಾರ ಪುತ್ತೂರು ನ್ಯಾಯಾಲಯ ಸಂಕೀರ್ಣದ ಪರಾಶರ ಸಭಾಭವನದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ‘ವಕೀಲರ ವೃತ್ತಿ ಶ್ರೇಷ್ಠ ಅನುಭೂತಿ’ ವಿಶೇಷ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ದೇಶದ ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡುವವರು ಸೈನಿಕರಾದರೆ, ಸಮಾಜದ ವ್ಯಕ್ತಿಗಳ ಸ್ವಾತಂತ್ರ್ಯ ಹರಣವಾಗದಂತೆ ನೋಡಿಕೊಳ್ಳುವವರು ವಕೀಲರು. ಹಾಗಾಗಿ, ವಕೀಲರು ಕೂಡ ಸೈನಿಕರಿದ್ದಂತೆ’ ಎಂದರು ಅಭಿಪ್ರಾಯಪಟ್ಟರು.

ADVERTISEMENT

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಭಾರತೀಯ ಸಾಂಸ್ಕೃತಿಕ ಅನುಭೂತಿಯಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಯಶಸ್ಸು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ವಕೀಲರು ಅಧ್ಯಯನಶೀಲರಾಗುವ ಜತೆಗೆ ಚಿಂತನಾಶೀಲರಾಗಬೇಕು. ಸರಿಯಾದ ವಾದ ಮಂಡನೆ ಮಾಡಲು ಭಾಷಾ ಸೌಂದರ್ಯ ಇರಬೇಕು ಎಂದ ಹೇಳಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಓಂಕಾರಪ್ಪ ಮಾತನಾಡಿದರು. ಭಾರತ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಶಶಿಕಾಂತ್, ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಕೋಶಾಧಿಕಾರಿ ಶ್ಯಾಮಪ್ರಸಾದ್ ಕೈಲಾರ್ ಉಪಸ್ಥಿತರಿದ್ದರು.

ಪುತ್ತೂರು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ, ನ್ಯಾಯಾಧೀಶ ಗೌಡ ಆರ್.ಪಿ. ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ ರೈ ಈಶ್ವರಮಂಗಲ ಸ್ವಾಗತಿಸಿದರು. ವಕೀಲ ಮುರಳೀಕೃಷ್ಣ ಚಳ್ಳಂಗಾರು ಪ್ರಾಸ್ತಾವಿಕಾಗಿ ಮಾತನಾಡಿದರು. ವಕೀಲರ ಸಂಘದ ಜತೆ ಕಾರ್ಯದರ್ಶಿ ಸೀಮಾ ನಾಗರಾಜ್ ವಂದಿಸಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ನಿರೂಪಿಸಿದರು.

‘ಸಮಾಜಕ್ಕೆ ಕೊಡುಗೆ ನೀಡಿ’

ಭಾರತ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ನರಗುಂದ ಎಂ.ಡಿ. ಮಾತನಾಡಿ, ‘ಸಂವಿಧಾನ ದಿನಾಚರಣೆ ಮಾಡುವಾಗ ವಕೀಲರು ಒಂದು ದಿನದ ಬಗ್ಗೆ ಮಾತ್ರ ಚಿಂತನೆ ಮಾಡದೆ ಮುಂದಿನ 50 ವರ್ಷಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗಿರಬಹುದೆಂಬ ಕನಸು ಕಾಣಬೇಕು. ವೃತ್ತಿಯಲ್ಲಿ ಆಸೆಗಳು ಇದ್ದೇ ಇರುತ್ತದೆ. ಆದರೆ, ನಾವು ವಕೀಲರಾಗಲು ಅವಕಾಶ ಮಾಡಿಕೊಟ್ಟಿರುವುದು ನಮ್ಮ ತಂದೆ- ತಾಯಿ ಮಾತ್ರವಲ್ಲ ಇಡೀ ಸಮಾಜ. ಹಾಗಾಗಿ, ನಾವು ಸಮಾಜಕ್ಕೆ ಏನು ಕೊಡಬಹುದೆಂದು ಚಿಂತನೆ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.