ADVERTISEMENT

ಕೌಶಲಾಭಿವೃದ್ಧಿ ಇಂದಿನ ಅಗತ್ಯ: ಉದಯಕುಮಾರ್ ಆರ್. ಯರಗಟ್ಟಿ

ಎನ್‌ಐಟಿಕೆಯಲ್ಲಿ ಸೌರ್‌ ವಿದ್ಯುತ್ ಚಾರ್ಜಿಂಗ್ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 16:17 IST
Last Updated 11 ಮೇ 2022, 16:17 IST
ಸುರತ್ಕಲ್ ಎನ್‌ಐಟಿಕೆಯಲ್ಲಿ ಸೌರ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ನಿರ್ದೇಶಕ ಉದಯಕುಮಾರ್ ಯರಗಟ್ಟಿ ಉದ್ಘಾಟಿಸಿದರು.
ಸುರತ್ಕಲ್ ಎನ್‌ಐಟಿಕೆಯಲ್ಲಿ ಸೌರ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ನಿರ್ದೇಶಕ ಉದಯಕುಮಾರ್ ಯರಗಟ್ಟಿ ಉದ್ಘಾಟಿಸಿದರು.   

ಮಂಗಳೂರು: ಎನ್‌ಐಟಿಕೆ ಸುರತ್ಕಲ್‌ನಲ್ಲಿ ಅಳವಡಿಸಿರುವ ಇ– ಮೊಬಿಲಿಟಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ‘ಉರ್ಜಾ’ ಸೌರ್‌ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ಎನ್‌ಐಟಿಕೆ ನಿರ್ದೇಶಕ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ಬುಧವಾರ ಉದ್ಘಾಟಿಸಿದರು.

ಕೌಶಲಾಭಿವೃದ್ಧಿ ಇಂದಿನ ಅಗತ್ಯವಾಗಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು ನೀತಿ ಆಯೋಗದ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದ ಉದಯಕುಮಾರ್, ‘ರಾಷ್ಟ್ರೀಯ ತಂತ್ರಜ್ಞಾನ ದಿನವೇ ಈ ಚಾರ್ಜಿಂಗ್ ಕೇಂದ್ರ ಉದ್ಘಾಟನೆಯಾಗಿದೆ. ಯುವ ಜನರು ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಜತೆಗೆ ಕರ್ತವ್ಯವೇ ದೇವರು ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

‘ಯುವಶಕ್ತಿ ತಮ್ಮಲ್ಲಿರುವ ಸಾಮರ್ಥ್ಯ ಅರಿತು ಕೆಲಸ ಮಾಡಬೇಕು. ಕೇವಲ ಉದ್ಯೋಗಿಯಾಗದೆ, ಉದ್ಯೋಗದಾತರಾಗಬೇಕು. ಇದು ಆತ್ಮ ನಿರ್ಭರ್ ಭಾರತದ ಪರಿಕಲ್ಪನೆಗೆ ಪುಷ್ಠಿ ನೀಡುತ್ತದೆ. ಸ್ವಾವಲಂಬಿ ವ್ಯಕ್ತಿಗಳಾಗುವ ಮೂಲಕ ಇತರರಿಗೆ ನೆರವಾಗಬೇಕು. ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದೆ. ಹಿಂದೂ ಸಂಸ್ಕೃತಿಯ ರೂಢಿಸಿಕೊಂಡು ಬಂದಿರುವ ಪದ್ಧತಿಗಳು ಆಧುನಿಕ ವಿಜ್ಞಾನಕ್ಕೆ ಪೂರಕವಾಗಿವೆ. ಹನುಮಾನ್‌ ಚಾಲೀಸಾದಲ್ಲಿ ಸೂರ್ಯ ಮತ್ತು ಭೂಮಿ ನಡುವಿನ ಅಂತರದ ಉಲ್ಲೇಖವಿದೆ. ವಿದೇಶಿ ವಿಜ್ಞಾನಿಗಳು ಈಗ ಅದನ್ನು ಪತ್ತೆ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ಎಎಐಆರ್ ಡೀನ್ ಪ್ರೊ. ವಿಜಯ್ ದೇಸಾಯಿ, ಮಾಜಿ ಡೀನ್ ಪ್ರೊ. ಕೆ.ಪಿ.ವಿಠ್ಠಲ್, ಪ್ರೊ. ಎಸ್.ಎಂ. ಕುಲಕರ್ಣಿ, ಪ್ರೊ. ಕೆ.ವಿ.ಗಂಗಾಧರನ್, ಇ– ಮೊಬಿಲಿಟಿ ಯೋಜನೆಯ ಮುಖ್ಯಸ್ಥ ಪ್ರೊ. ಪೃಥ್ವಿರಾಜ್ ಇದ್ದರು.

ಸೌರ್‌ ವಿದ್ಯುತ್ ಚಾರ್ಜಿಂಗ್ ಕೇಂದ್ರದ ಯೋಜನೆಯು ಕಾಲೇಜಿನ 1970ರ ಬ್ಯಾಚ್‌ ವಿದ್ಯಾರ್ಥಿಗಳ ಕೊಡುಗೆಯಾಗಿದೆ. ಈ ಬ್ಯಾಚ್‌ನ ಹೆಚ್ಚಿನವರು ಈಗ ನಿವೃತ್ತ ಜೀವನ ನಡೆಸುತ್ತಿದ್ದು, ಅವರಲ್ಲಿ ಕೆಲವರು ಕಾರ್ಯಕ್ರಮಕ್ಕೆ ಹಾಜರಾಗಿ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.