ADVERTISEMENT

ಸೂರ್ಯಗ್ರಹಣ: ನಭದ ಕೌತುಕ‌ ಕಣ್ತುಂಬಿಕೊಂಡ ಮಂಗಳೂರಿನ ಜನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 11:48 IST
Last Updated 21 ಜೂನ್ 2020, 11:48 IST
ಮಂಗಳೂರಿನಲ್ಲಿ ಕಂಡು ಬಂದ ಸೂರ್ಯಗ್ರಹಣದ ದೃಶ್ಯಗಳು ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನಲ್ಲಿ ಕಂಡು ಬಂದ ಸೂರ್ಯಗ್ರಹಣದ ದೃಶ್ಯಗಳು ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಮಂಗಳೂರು: ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮೋಡ ಕವಿದ ವಾತಾವರಣದ ಮಧ್ಯೆಯೂ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದೆ.

ಸೌರಮಂಡಲದ ಕೌತುಕವಾಗಿರುವ ಸೂರ್ಯಗ್ರಹಣವು ಬೆಳಿಗ್ಗೆ 10.17ಕ್ಕೆ ಪ್ರಾರಂಭವಾಗಿದ್ದು, 11.36ರ ವೇಳೆಗೆ ಗರಿಷ್ಠ ಶೇ 40ರಷ್ಟು ಗೋಚರಿಸಿದೆ. ಮಧ್ಯಾಹ್ನ 1.30ಕ್ಕೆ ಸೂರ್ಯ ಗ್ರಹಣ ಮುಕ್ತಾಯಗೊಂಡಿದೆ.

ನಗರದ ಆಕಾಶಭವನದ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಸೂರ್ಯಗ್ರಹಣದ ವೀಕ್ಷಣೆ ಮತ್ತು ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು. ಆಕಾಶಭವನದ ಗೊಲ್ಲರಬೆಟ್ಟಿನ ಶಿಕ್ಷಕ ಪ್ರೇಮನಾಥ್ ಮರ್ಣೆ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಆಸಕ್ತರು ಭಾಗವಹಿಸಿದ್ದರು.

ADVERTISEMENT

ಕಲಾವಿದ, ವೈಜ್ಞಾನಿಕ ಶಿಕ್ಷಕರಾಗಿರುವ ಅರವಿಂದ ಕುಡ್ಲ ಮುಖ್ಯ ಅತಿಥಿಗಳಾಗಿದ್ದರು. ನಭೋಮಂಡಲದ ವೈಜ್ಞಾನಿಕ ಕೌತುಕಗಳು, ಸೂರ್ಯ-ಚಂದ್ರರ ಪಥಚಲನೆ, ಸೂರ್ಯಗ್ರಹಣಗಳ ಬಗ್ಗೆ ಅವರು ಸಮಗ್ರ ಮಾಹಿತಿ ನೀಡಿದರು.

ಕೆಲ ಕಾಲ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಯಿತು. ಬಳಿಕ ಬಾನಿನಲ್ಲಿ ಸೂರ್ಯಗ್ರಹಣದ ವೀಕ್ಷಣೆ ಮಾಡಲಾಯಿತು. ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದ ಕನ್ನಡಕಗಳಿಂದ ಆಕಾಶ ವೀಕ್ಷಣೆ ಮಾಡಿದರು.

ಚಿಂತನ ಸಾಂಸ್ಕೃತಿಕ ಬಳಗದ ಸಂಯೋಜ, ಶಿಕ್ಷಕ ಪ್ರೇಮನಾಥ್ ಮರ್ಣೆ, ವಕೀಲ ಸುಕೇಶ್ ಕುಮಾರ್ ಶೆಟ್ಟಿ, ಇತರರು ಇದ್ದರು.

ದೇವಸ್ಥಾನಗಳಲ್ಲಿ ಶುದ್ಧತೆ: ಮಧ್ಯಾಹ್ನ ಗ್ರಹಣ ಮೋಕ್ಷವಾದ ನಂತರ ಕರಾವಳಿಯ ದೇವಸ್ಥಾನಗಳಲ್ಲಿ ಶುದ್ಧತೆ ನಡೆಯಿತು. ಗ್ರಹಣ ಮೋಕ್ಷದ ನಂತರ ದೇವಸ್ಥಾನಗಳನ್ನು ಶುಚಿಗೊಳಿಸಿ, ಬಳಿಕ ವಿಶೇಷ ಪೂಜೆ ಪುನಸ್ಕಾರ ನಡೆಲಾಯಿತು. ಕುದ್ರೋಳಿ ದೇವಸ್ಥಾನದಲ್ಲಿ ಸಿಬ್ಬಂದಿ ಎಲ್ಲೆಡೆ ತೊಳೆದು ಸ್ವಚ್ಛಗೊಳಿಸಿದರು. ನಂತರ ವಿಶೇಷ ಪೂಜೆ ನಡೆಯಿತು.

ವಿಚಾರವಾದಿಗಳ ಸಂಘದಿಂದ ಮೌಢ್ಯ ನಿವಾರಣೆ

ಸೂರ್ಯಗ್ರಹಣದ ಸಂದರ್ಭದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಮೌಢ್ಯಗಳ ನಿವಾರಣೆಗೆ ರಾಷ್ಟ್ರೀಯ ವಿಚಾರವಾದಿಗಳ ಸಂಘದಿಂದ ಸೂರ್ಯಗ್ರಹಣದ ಸಮಯದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ಜನರು ಮನೆಯಲ್ಲಿಯೇ ಉಳಿದಿದ್ದರೂ, ವಿಚಾರವಾದಿಗಳ ಸಂಘದ ಸದಸ್ಯರು, ರಸ್ತೆಗೆ ಬಂದು ಗ್ರಹಣವನ್ನು ವೀಕ್ಷಿಸಿದರು.

ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ಮಂಗಳ ಈಜುಕೊಳದಲ್ಲಿ ಈಜುವ ಹಾಗೂ ಉಪಾಹಾರ ಸೇವಿಸುವ ಮೂಲಕ ಮೌಢ್ಯ ನಿವಾರಣೆಗೆ ಮುಂದಾಗಿದ್ದ ಸದಸ್ಯರು, ಈ ಬಾರಿ ಕೋವಿಡ್‌ನಿಂದಾಗಿ ಸುರಕ್ಷಿತ ಅಂತರ ಕಾಪಾಡಿಕೊಂಡು ಮಂಗಳ ಈಜುಕೊಳದ ಬಳಿ ಸೇರಿದ್ದರು. ವಿಶೇಷ ಕನ್ನಡಕಗಳನ್ನು ಧರಿಸಿ, ಸೂರ್ಯಗ್ರಹಣ ವೀಕ್ಷಿಸಿದರು. ಇದೇ ವೇಳೆ ಉಪಾಹಾರ ಸೇವಿಸುವ ಮೂಲಕ ಮೌಢ್ಯವನ್ನು ನಿವಾರಿಸಲು ಯತ್ನಿಸಿದರು.

ಡಾ.ಕೃಷ್ಣಪ್ಪ ಕೊಂಚಾಡಿ ಹಾಗೂ ಅವರ ಪತ್ನಿ ಸುನಂದಾ, ಪ್ರಭು ನರಹರಿ, ಸುಷ್ಮಾ ಹಾಗೂ ಅವರ ಮಕ್ಕಳು, ಕಾರ್ತಿಕ, ಸೋನಾಲಿ, ಪುಷ್ಪರಾಜ್‌, ಅರುಣ್‌, ವಿವೇಕ, ಮಯೂರ, ಶ್ಯಾಮಸುಂದರ್‌ರಾವ್‌, ಹರಿಯಪ್ಪ ಪೇಜಾವರ್‌, ವಿಚಾರವಾದಿಗಳ ಸಂಘದ ಪ್ರೊ. ನರೇಂದ್ರ ನಾಯಕ್‌ ಹಾಗೂ ಅವರ ಪತ್ನಿ ಆಶಾ ನಾಯಕ್‌ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.