ADVERTISEMENT

ಸೋಮನಾಥ ನಾಯಕ್‌ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 7:23 IST
Last Updated 1 ನವೆಂಬರ್ 2022, 7:23 IST
ಸೋಮನಾಥ ನಾಯಕ್‌ (ಬಲದಿಂದ ಮೊದಲನೆಯವರು) ಅವರು ಬೆಳ್ತಂಗಡಿಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಶರಣಾದರು
ಸೋಮನಾಥ ನಾಯಕ್‌ (ಬಲದಿಂದ ಮೊದಲನೆಯವರು) ಅವರು ಬೆಳ್ತಂಗಡಿಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಶರಣಾದರು   

ಉಜಿರೆ: ಧರ್ಮಸ್ಥಳದ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರದ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಕೆ. ಸೋಮನಾಥ ನಾಯಕ್ ಬೆಳ್ತಂಗಡಿಯಲ್ಲಿ ನ್ಯಾಯಾಲಯಕ್ಕೆ ಸೋಮವಾರ ಶರಣಾದರು.

ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಕ್ಷೇತ್ರದ ಸಂಸ್ಥೆಗಳ ಗೌರವಕ್ಕೆ ಚ್ಯುತಿ ಬರುವಂತಹ ಹೇಳಿಕೆ ನೀಡಬಾರದು ಎಂದು ಬೆಳ್ತಂಗಡಿ ಜೆಎಂಎಫ್‌ ನ್ಯಾಯಾಲಯವು 2013ರ ನ.5ರಂದು ಸೋಮನಾಥ ನಾಯಕ್ ಮತ್ತು ಇತರ ಐವರ ವಿರುದ್ಧ ನಿರ್ಬಂಧ ಹೇರಿತ್ತು.

ಆ ಬಳಿಕವೂ ಸಾಮಾಜಿಕ ಜಾಲತಾಣಗಳಲ್ಲಿ ಹೆಗ್ಗಡೆ ವಿರುದ್ಧ ನಾಯಕ್ ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಹೆಗ್ಗಡೆಯವರು ನೀಡಿದ್ದ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿ, ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ದೂರುದಾರರಿಗೆ ₹ 4.5 ಲಕ್ಷ ಪರಿಹಾರ ನೀಡಬೇಕು. ಇದಕ್ಕಾಗಿ ಆಸ್ತಿಯನ್ನೂ ಮುಟ್ಟುಗೋಲು ಹಾಕಬಹುದು ಎಂದು ಆದೇಶಿಸಿತ್ತು.

ADVERTISEMENT

ಈ ತೀರ್ಪಿನ ವಿರುದ್ಧ ನಾಯಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ಬೆಳ್ತಂಗಡಿ ಯ ಜೆಎಂಎಫ್‌ಸಿಯ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ತಿರಸ್ಕರಿಸಿದ್ದರು. ಅದರ ವಿರುದ್ಧ ಜೆಎಂಎಫ್‌ಸಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಲ್ಲಿ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕೃತಗೊಂಡಿತ್ತು. ನಾಯಕ್ ದಸ್ತಗಿರಿಗೆ 2022ರ ಮಾರ್ಚ್ 31ರಂದು ಆದೇಶವಾಗಿತ್ತು.

ಇದನ್ನು ಪ್ರಶ್ನಿಸಿ ಕರ್ನಾಟಕದ ಹೈಕೋರ್ಟ್‌ನಲ್ಲಿ ನಾಯಕ್‌, ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ’ ಎಂದು ಹೈಕೋರ್ಟ್‌ 2022ರ ಮೇ 5ರಂದು ತೀರ್ಪು ನೀಡಿತ್ತು. ಇದನ್ನು ನಾಯಕ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿಪ್ರಶ್ನಿಸಿದ್ದರು. ಅವರ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಅ.19ರಂದು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.