ADVERTISEMENT

ಜಾತಿಗಣತಿ ವರದಿ ತಿರಸ್ಕರಿಸಿ, ಹೊಸ ಗಣತಿ ನಡೆಸಿ: ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 13:54 IST
Last Updated 12 ಏಪ್ರಿಲ್ 2025, 13:54 IST
ವಿ.ಸೋಮಣ್ಣ
ವಿ.ಸೋಮಣ್ಣ   

ಮಂಗಳೂರು: 'ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು. ಬೇಕಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನು ಒಂದೂವರೆ ವರ್ಷದಲ್ಲಿ ಹೊಸತಾಗಿ ಜಾತಿ ಗಣತಿ ಮಾಡಿಸಿ, ಆ ವರದಿಯನ್ನು ಜಾರಿಗೆ ತರಲಿ' ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಜಾತಿ ಗಣತಿ ವರದಿ ಜಾರಿಯ ಮೂಲಕ ಗೊಂದಲದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅವರು ದಿ.ದೇವರಾಜ ಅರಸು ಅವರಿಗಿಂತ ದೊಡ್ಡವರಲ್ಲ. ಈಗಿನ ಜಾತಿಗಣತಿ ವರದಿ ಮಕ್ಕಿಕಾಮಕ್ಕಿ ಮಕ್ಮಲ್ ಟೋಪಿ. ಎಲ್ಲೋ ಕುಳಿತು ಅವರಿಗೆ ಬೇಕಾದಂತೆ ವರದಿ ರೂಪಿಸಲಾಗಿದೆ. ಇದು ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಇಂತಹ ಮಹಾಪರಾಧ ಮಾಡುವ ಚಿಂತನೆ ಬೇಡ. ಇದನ್ನು ಜಾರಿಗೊಳಿಸುವುದು ಅವರಿಗೆ ಗೌರವ ತರುವುದಿಲ್ಲ’ ಎಂದರು.

‘ಈ ವರದಿಯನ್ನು ಜಾರಿಗೊಳಿಸುವ ಅವಶ್ಯಕತೆ ಇರಲಿಲ್ಲ. ಯಾವ ಉದ್ದೇಶಕ್ಕಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆಯೋ ಗೊತ್ತಿಲ್ಲ ಎಂದು ರಾಜ್ಯ ಸಂಪುಟದ ಬಹುತೇಕ ಮಂತ್ರಿಗಳು ಹೇಳುತ್ತಿದ್ದಾರೆ’ ಎಂದರು.

ADVERTISEMENT

‘ಭ್ರಷ್ಟ ವ್ಯವಸ್ಥೆಯನ್ನು ರೂಪಿಸಿ, ‘ನಾನು ಬಾರಿ ಒಳ್ಳೆಯವನು’ ಎಂದು ನಿಮಗೆ ನೀವೇ ಹೇಳಿಕೊಳ್ಳುತ್ತಿದ್ದಿರಿ. ಇನ್ನೊಂದು ಕಡೆ ಅದಕ್ಕೆ ಅಪಚಾರವಾಗುವಂತಹ ತೀರ್ಮಾನ ಕೈಗೊಳ್ಳುತ್ತಿದ್ದೀರಿ. ಜನರನ್ನು ತುಂಬಾ ದಿನ ಯಾಮಾರಿಸಲು ಆಗದು. ಇಂತಹ ತಪ್ಪು ಮಾಡಿ ನಾಲ್ಕು ಜನರ ಮಧ್ಯೆ ಖಳನಾಯಕರಾಗದಿರಿ’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಹೇಳಿದರು.

ಶಾಸಕ ಬಸನಗೌಡಪಾಟೀಲ ಯತ್ನಾಳ್‌ ಅವರಿಗೆ ಬೆದರಿಕೆ ಒಡ್ಡಿರುವ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ‘ಇದಕ್ಕಿಂತ ಪಾಪದ ಕೆಲಸ ಇನ್ನೊಂದಿಲ್ಲ. ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.