ADVERTISEMENT

ಕೊಣಾಜೆ‌ಯ ಪ್ರಜ್ಞಾ ಚಟುವಟಿಕೆಗೆ ಮನಸೋತ ಸೋನು ಸೂದ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:04 IST
Last Updated 7 ಜುಲೈ 2022, 4:04 IST
ಮಕ್ಕಳೊಂದಿಗೆ ಸಂಭ್ರಮಿಸಿದ ಸೋನು ಸೂದ್
ಮಕ್ಕಳೊಂದಿಗೆ ಸಂಭ್ರಮಿಸಿದ ಸೋನು ಸೂದ್   

ಮಂಗಳೂರು/ಉಳ್ಳಾಲ: ಮಹಿಳೆಯರ ಆಸರೆಗೆ ಮತ್ತು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿರುವ ‘ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್‌‘ನ ಚಟುವಟಿಕೆಗಳಿಗೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಮನಸೋತರು.

ಕೊಣಾಜೆ ಸಮೀಪದ ಮುಡಿಪುವಿನಲ್ಲಿ ಪ್ರಜ್ಞಾ ಸ್ಕಿಲ್‌ ಸೆಂಟರ್‌ಗೆ ಬುಧವಾರ ಭೇಟಿ ನಿಡಿದ ಸೋನು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

‘ತಾಯಿಯ ತವರೂರು ಪಂಜಾಬ್‌ಗೆ ಹೋಗುವಾಗ ತಂದೆಯೊಂದಿಗೆ ನೊಂದವರಿಗೆ ಆಹಾರ ನೀಡುತ್ತಿದ್ದೆವು. ಆಗ ಅವರ ಮುಖದಲ್ಲಿ ಮೂಡುತ್ತಿದ್ದ ಮಂದಹಾಸ ಖುಷಿ ಕೊಡುತಿತ್ತು. ನನ್ನ ಹೆತ್ತವರು ವಿದ್ಯಾರ್ಥಿಗಳಿಗೂ ನೆರವು ನೀಡುತ್ತಿದ್ದರು. ಅಂದು ನೆರವು ಪಡೆದವರು ಈಗ ಉನ್ನತ ಹುದ್ದೆಗಳಲ್ಲಿದ್ದಾರೆ‘ ಎಂದು ಸೋನು ಹೇಳಿದರು.

ADVERTISEMENT

‘ಮುಷ್ಠಿ ತೆರೆದರೆ ಇನ್ನೊಬ್ಬರಿಗೆ ಸಹಾಯವಾಗುವಂತೆ ಇರಬೇಕೇ ಹೊರತು ತೊಂದರೆಯಾಗಬಾರದು ಎಂಬ ತಾಯಿಯ ಮಾತುಗಳು ಇನ್ನೂ ಮನಸಿನಲ್ಲಿವೆ. ಹಣೆಬರಹವನ್ನು ನಂಬಬೇಡಿ. ಕಷ್ಟಪಟ್ಟು ಕೆಲಸ ಮಾಡಿ ಕೌಶಲ ಬೆಳೆಸಿಕೊಳ್ಳಿ. ರಾಜ್ಯದಲ್ಲಿ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಗಾಗಿ ಸಹಕಾರ ನೀಡಲು ಸಿದ್ಧ‘ ಎಂದು ಅವರು ಭರವಸೆ ನೀಡಿದರು.

ಪ್ರಜ್ಞಾ ಸಂಸ್ಥೆಯ ಸಂಯೋಜಕಿ ದೀಪ್ತಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಸ್ಥಾಪಕಿ ಹಿಲ್ಡಾ ರಾಯಪ್ಪ, ಅಮಿತಾ ರಾವ್, ಶಾಲಿನಿ ಅಯ್ಯಪ್ಪ, ಶರತ್ ಕುಮಾರ್ ಎನ್.ಕೆ, ವಿಜಯ ಕಣ್ಣ, ದಿವ್ಯಾ, ಅಶ್ವಿತಾ, ಸುಕನ್ಯಾ ದಾಸ್, ಲಿಲ್ಲಿ, ಮೇರಿ ಹಾಗೂ ಬಾಬಣ್ಣ ಇದ್ದರು.

---

ಅಹಂ ಇಲ್ಲದೆ ಎಲ್ಲರೊಂದಿಗೆ ಬೆರೆದ ಸೋನು ಅವರ ನಡತೆ ಖುಷಿ ನೀಡಿತು. ನನ್ನ ಹಳೆಯ ವಿದ್ಯಾರ್ಥಿಯೊಬ್ಬನ ಜೊತೆಯಲ್ಲಿ ಓಡಾಡಿದ ಅನುಭವ ಆಯಿತು.
- ಹಿಲ್ಡಾ ರಾಯಪ್ಪ, ಪ್ರಜ್ಞಾ ಸಂಸ್ಥೆಯ ಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.