ADVERTISEMENT

ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಇಸ್ರೇಲ್‌ ಪ್ರವಾಸ

ಭೂಮಿ, ಬಂಡವಾಳ, ನೀರಿನ ಮಿತವ್ಯಯ ಬಳಕೆ ಕುರಿತು 26 ಸಹಕಾರಿಗಳ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 11:09 IST
Last Updated 16 ಜೂನ್ 2019, 11:09 IST

ಮಂಗಳೂರು: ಕಡಿಮೆ ನೀರು ಮತ್ತು ಜಮೀನಿನಲ್ಲಿ ಅಧಿಕ ಕೃಷಿ ಉತ್ಪಾದನೆಯ ಕುರಿತು ಅಧ್ಯಯನ ನಡೆಸಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 26 ಪ್ರತಿನಿಧಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಇಸ್ರೇಲ್‌ ಅಧ್ಯಯನ ಪ್ರವಾಸಕ್ಕೆ ಕಳುಹಿಸಿಕೊಡಲಿದೆ.

‘ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬ್ಯಾಂಕ್ ವ್ಯಾಪ್ತಿಗೆ ಒಟ್ಟು 176 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ಈ ಪೈಕಿ ಮೊದಲ ಹಂತದಲ್ಲಿ 26 ಪ್ರತಿನಿಧಿಗಳು ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಇದೇ 20ರಿಂದ ಮಂಗಳೂರಿನಿಂದ ಹೊರಟು ಮುಂಬೈ ಮೂಲಕ ಇಸ್ರೇಲ್‌ಗೆ ತೆರಳುವರು. ಅಲ್ಲಿ ಆರು ದಿನಗಳು ಕೃಷಿ ಪದ್ಧತಿ ಕುರಿತು ಅಧ್ಯಯನ ನಡೆಸುವರು’ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಹಕಾರಿ ಕ್ಷೇತ್ರದ ಬ್ಯಾಂಕೊಂದು ತಮ್ಮ ಪ್ರತಿನಿಧಿಗಳನ್ನು ಅಧ್ಯಯನಕ್ಕಾಗಿ ಇಸ್ರೇಲ್‌ಗೆ ಕಳುಹಿಸುತ್ತಿರುವುದು ರಾಜ್ಯದಲ್ಲೇ ಪ್ರಥಮ’ ಎಂದು ಪ್ರತಿಪಾದಿಸಿದ ಅವರು, ತಂಡವು ಇಸ್ರೇಲ್‌ನ ಜೆರುಸಲೇಮ್ ಹಾಗೂ ಅಲ್ಲಿನ ಸಂಸತ್ತಿಗೂ ಭೇಟಿ ನೀಡಲಿದೆ. ಬೆತ್ಲಹೇಮ್‌ನಲ್ಲಿ ಕುರಿ ಸಾಕಾಣಿಕೆ ಮತ್ತು ಹಾಲಿನ ಉತ್ಪಾದನೆ ಕುರಿತು ಅಧ್ಯಯನ, ಸಾವಯವ ಹಾಗೂ ಪರ್ಯಾಯ ಕೃಷಿ ಉತ್ಪನ್ನಗಳ ಅಧ್ಯಯನ, ಎಸ್‌.ಸಿ.ಆರ್. ಕಂಪೆನಿಯಲ್ಲಿ ಸ್ಮಾರ್ಟ್‌ ಡೇರಿ ಫಾರ್ಮ್ ಕುರಿತು ಅಧ್ಯಯನ, ನೆಟಾಫಿಮ್‌ ನೀರಾವರಿ ಕಂಪೆನಿಗೆ ಭೇಟಿ, ಹನಿ ನೀರಾವರಿ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ವಿವರಿಸಿದರು.

ADVERTISEMENT

ತಂಡವು ವಾಪಾಸಾದ ಬಳಿಕ ವಿಸ್ತೃತ ವರದಿಯನ್ನು ನೀಡಲಿದೆ. ಈ ವರದಿಯನ್ನು ಆಧರಿಸಿಕೊಂಡು, ಮುಂದಿನ ದಿನಗಳಲ್ಲಿ ನೀರಿನ ಮಿತಬಳಕೆ, ಕಡಿಮೆ ಖರ್ಚು, ಕಡಿಮೆ ಜಮೀನಿನಲ್ಲಿ ಅಧಿಕ ಉತ್ಪಾದನೆ, ಸುಧಾರಿತ ಸಾವಯವ ಮತ್ತಿತರ ಪದ್ಧತಿಗಳನ್ನು ಜಾರಿಗೊಳಿಸಲಾಗುವುದು ಎಂದರು.

ತಲಾ ₹1.70 ಲಕ್ಷದಂತೆ ಒಟ್ಟು ತಂಡಕ್ಕೆ ಸುಮಾರು ₹44.20ಲಕ್ಷ ಖರ್ಚು ಬರಲಿದ್ದು, ಬ್ಯಾಂಕ್ ಭರಿಸಲಿದೆ. ಇದು ಯಾವುದೇ ಸರ್ಕಾರಿ ಯೋಜನೆಗೆ ಸಂಬಂಧಿಸಿಲ್ಲ. ಬ್ಯಾಂಕ್‌ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.