
ಮಂಗಳೂರು: ‘ಬೆಂಗಳೂರಿನ ಶಾಸಕರ ಭವನಕ್ಕೆ ಟೆಂಡರ್ ಕರೆಯದೆಯೇ ಅನಗತ್ಯ ಸೌಕರ್ಯಗಳನ್ನು ಕಲ್ಪಿಸಿ, ಭಾರಿ ಭ್ರಷ್ಟಾಚಾರ ನಡೆಸಲಾಗಿದೆ. ವಿಧಾನ ಸಭಾಧ್ಯಕ್ಷರ ಹುದ್ದೆಯೂ ಲಾಭದಾಯಕ ಎಂದು ಯು.ಟಿ.ಖಾದರ್ ತೋರಿಸಿಕೊಟ್ಟಿದ್ದಾರೆ’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಾಸಕರ ಭವನಕ್ಕೆ ಸೇಫ್ ಲಾಕರ್, ಸ್ಮಾರ್ಟ್ ಡೋರ್ ಲಾಕ್ ವ್ಯವಸ್ಥೆ, ಹೊಸ ಬೆಡ್‌ಶೀಟ್, ದಿಂಬು, ಕಿಟಕಿಗಳಿಗೆ ಹೊಸ ಪರದೆಗಳನ್ನು ಅಳವಡಿಸಲಾಗಿದೆ. ಶಾಸಕರ ಕಾರುಗಳಿಗೆ ಸೀಟ್ ಕವರ್ ಮತ್ತಿತರ ಹೊಸ ಪರಿಕರ ಒದಗಿಸಲಾಗಿದೆ. ಈ ಸೌಕರ್ಯಗಳನ್ನು ನಾವು ಕೇಳಿಲ್ಲ‘ಎಂದರು.
‘ವಿಧಾನಸೌಧದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ಪುಸ್ತಕ ಮೇಳಕ್ಕೆ ₹ 4.5 ಕೋಟಿ ವೆಚ್ಚ ಮಾಡಿದ್ದಾರೆ. ವಿಧಾನಸೌಧದ ಬೀಟೆ ಮರದ ಬಾಗಿಲಿಗೆ ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲಾಗಿದೆ. ಶಾಸಕರ ಲಾಂಜನ್ನು ಮಸಾಜ್ ಪಾರ್ಲರ್‌ನಂತೆ ಮಾಡಿದ್ದಾರೆ. ಅಲ್ಲಿ ಮಸಾಜ್ ಯಂತ್ರಗಳ ಪ್ರಚಾರ ಕಾರ್ಯ ನಡೆಯುತ್ತಿದೆ. ಉಚಿತ ಆಹಾರ ಪೂರೈಸಲು ಕ್ರಮವಹಿಸಿದ್ದಾರೆ. ಆದರೆ, ಎಷ್ಟು ಮಂದಿಗೆ ಆಹಾರ ನೀಡಲಾಗಿದೆ ಎಂಬ ಲೆಕ್ಕವೇ ಇಲ್ಲ’ ಎಂದು ಆರೋಪಿಸಿದರು.
‘ಈ ಕುರಿತ ವಿವರಗಳನ್ನು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ನೀಡಲು ವಿಧಾನಸಭಾ ಸಚಿವಾಲಯ ನಿರಾಕರಿಸಿದೆ. ಈ ಸಚಿವಾಲಯವನ್ನೂ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ತರಬೇಕು. ಈ ಕುರಿತು ಆರ್‌ಟಿಐ ಅಡಿ ಮಾಹಿತಿ ನೀಡದಿದ್ದರೆ, ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನಿಸುತ್ತೇವೆ. ರಾಜ್ಯಪಾಲರಿಗೂ ದೂರು ನೀಡುತ್ತೇವೆ’ ಎಂದರು.
ಕ್ಷೇತ್ರದಲ್ಲಿ ಚರಂಡಿ ದುರಸ್ತಿಗೂ ಸರ್ಕಾರ ಅನುದಾನ ನೀಡುತ್ತಿಲ್ಲ. ಶಾಸಕರಿಗೆ ಮುಖ್ಯಮಂತ್ರಿಯವರು ಘೋಷಣೆ ಮಾಡಿದ ವಿಶೇಷ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಧಾನಸಭೆ ಸಚಿವಾಲಯಕ್ಕೆ ಬೇಕಾಬಿಟ್ಟಿ ಅನುದಾನ ಲಭ್ಯವಾಗುತ್ತಿರುವುದು ಹೇಗೆ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ವಸಂತ್ ಪೂಜಾರಿ, ಪೂರ್ಣಿಮಾ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜಗೋಪಾಲ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಯು.ಟಿ.ಖಾದರ್ ಅವರಿಗೆ ಕರೆ ಮಾಡಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.