ADVERTISEMENT

ಮಂಗಳೂರು: ಖಾಕಿಗಳ ಆರೋಗ್ಯ ರಕ್ಷೆಗೆ ವಿಶೇಷ ಕಾಳಜಿ

ಪೊಲೀಸರಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯ ಇಳಿಕೆ

ಸಂಧ್ಯಾ ಹೆಗಡೆ
Published 5 ಮೇ 2021, 4:43 IST
Last Updated 5 ಮೇ 2021, 4:43 IST
ಮಂಗಳೂರಿನ ಉರ್ವ ಠಾಣೆಯ ಹೊರ ಆವರಣದಲ್ಲಿ ದೂರುದಾರರ ಅಹವಾಲು ಆಲಿಸಲು ನಿರ್ಮಿಸಿರುವ ಕುಟೀರ
ಮಂಗಳೂರಿನ ಉರ್ವ ಠಾಣೆಯ ಹೊರ ಆವರಣದಲ್ಲಿ ದೂರುದಾರರ ಅಹವಾಲು ಆಲಿಸಲು ನಿರ್ಮಿಸಿರುವ ಕುಟೀರ   

ಮಂಗಳೂರು: ಸರ್ಕಾರ ವಿಧಿಸಿರುವ ಜನತಾ ಕರ್ಫ್ಯೂ ಕಟ್ಟುನಿಟ್ಟಿನ ಅನುಷ್ಠಾನ ದಲ್ಲಿ ಪೊಲೀಸರ ಪಾತ್ರ ಪ್ರಮುಖವಾ ದದ್ದು. ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವ ಅವರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ವಹಿಸಿರುವ ಪರಿಣಾಮ, ಎರಡನೇ ಅಲೆಯ ವೇಳೆ ಪಾಸಿಟಿವ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1,712 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಮೊದಲ ಅಲೆಯ ಸಂದರ್ಭದಲ್ಲಿ 330 ಪೊಲೀಸರಿಗೆ ಸೋಂಕು ತಗುಲಿತ್ತು. ಈಗ ಎರಡನೇ ಅಲೆಯ ಆರಂಭದಲ್ಲೇ ಮುನ್ನೆಚ್ಚರಿಕೆ ವಹಿಸಿದ್ದರಿಂದ 22 ಜನರಿಗೆ ಮಾತ್ರ ಕೋವಿಡ್ ದೃಢಪಟ್ಟಿದೆ. ಸೋಂಕು ದೃಢಪಟ್ಟವರಲ್ಲಿ ಹಲವರು ಊರಿಗೆ ಹೋಗಿ ಬಂದವರೂ ಇದ್ದಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

‘ಒಟ್ಟು ಸಿಬ್ಬಂದಿಯಲ್ಲಿ ಶೇ 93 ರಷ್ಟು ಜನರು ಮೊದಲನೇ ಡೋಸ್ ಲಸಿಕೆ ಪಡೆದಿದ್ದಾರೆ. 800ಕ್ಕೂ ಹೆಚ್ಚು ಜನರಿಗೆ ಎರಡನೇ ಡೋಸ್ ಲಸಿಕೆ ಯೂ ದೊರೆತಿದೆ. ಹೆಚ್ಚು ಸುರಕ್ಷತೆ ಹಾಗೂ ಸಕಾಲದಲ್ಲಿ ಲಸಿಕೆ ಪಡೆದಿದ್ದರಿಂದ ಹೆಚ್ಚಿನವರು ಸೋಂಕಿನಿಂದ ಮುಕ್ತ ರಾಗಿ, ಕರ್ತವ್ಯ ನಿರ್ವಹಣೆಯಲ್ಲಿದ್ದಾರೆ’ ಎನ್ನುತ್ತಾರೆ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್.

ADVERTISEMENT

ಮುನ್ನೆಚ್ಚರಿಕೆ ಕ್ರಮಗಳು ಏನು?: ಕಮಿಷನರೇಟ್ ವ್ಯಾಪ್ತಿಯಲ್ಲಿ ಕಿಯೋಸ್ಕ್ ವ್ಯವಸ್ಥೆಗೊಳಿಸಲಾಗಿದೆ. ಯಾರೂ ನೇರವಾಗಿ ಠಾಣೆಗೆ ಬರುವಂತಿಲ್ಲ. ಠಾಣೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸ್ಯಾನಿಟೈಸರ್ ಬಳಸಬೇಕು. ದೂರುದಾರರ ದೂರಿನ ಪ್ರತಿಗಳಿದ್ದರೆ ಅದನ್ನು ಕೂಡ ಓವನ್ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಬರ್ಕೆ ಠಾಣೆಯಲ್ಲಿ ಅಲ್ಲಿನ ಇನ್‌ಸ್ಪೆಕ್ಟರ್ ಆಸಕ್ತಿಯ ಫಲವಾಗಿ ಸ್ಟೀಮಿಂಗ್ ವ್ಯವಸ್ಥೆಗೊಳಿಸಲಾಗಿದೆ.

‘ಠಾಣೆಯ ಒಳಗೆ ಸಿಬ್ಬಂದಿಗೆ ಕೋವಿಡ್ ನಿಯಮ ಪಾಲನೆ ಕಡ್ಡಾಯ ಗೊಳಿಸಲಾಗಿದೆ. ಎಲ್ಲ ಠಾಣೆಗಳಲ್ಲಿ ಸಿಬ್ಬಂದಿಗೆ ಕುಡಿಯಲು ಬಿಸಿ ನೀರು, ಹರ್ಬಲ್ ಕಷಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಮಿಷನರೇಟ್ ಕೇಂದ್ರ ಕಚೇರಿಯಲ್ಲಿ ನಿತ್ಯ ಮಧ್ಯಾಹ್ನದ ಊಟ, ರಾತ್ರಿ ಇಸ್ಕಾನ್ ವತಿಯಿಂದ ಊಟ ಒದಗಿಸಲಾಗುತ್ತಿದೆ. ಸರಾಸರಿ 300 ಜನರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಪೊಲೀಸರ ಕುಟುಂಬದ ಎಂಟು ಮಹಿಳೆಯರು 10ಸಾವಿರ ಮಾಸ್ಕ್ ಸಿದ್ಧಪಡಿಸುತ್ತಿದ್ದು, ಅದನ್ನು ಪೊಲೀಸರಿಗೆ ವಿತರಿಸಲಾ ಗುತ್ತದೆ’ ಎನ್ನುತ್ತಾರೆ ಶಶಿಕುಮಾರ್.

‘ಲಸಿಕೆ ಕಾರ್ಯಕ್ರಮ ನಡೆಸಿ, ಪೊಲೀಸರ ಕುಟುಂಬದ ಸುಮಾರು 400 ಜನರಿಗೆ ಕೋವಿಡ್ ಲಸಿಕೆ ಒದಗಿಸಲಾಗಿದೆ. ವಿವಿಧ ಹಂತಗಳಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈ ಬಾರಿ ಕೋವಿಡ್ ಭೀಕರತೆ ಹೆಚ್ಚಿದ್ದರೂ ಪೊಲೀಸರು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಈ ಎಲ್ಲ ಕ್ರಮಗಳು ಸಹಕಾರಿಯಾಗಿವೆ’ ಎಂದು ಅವರು ವಿವರಿಸಿದರು.

‘ಠಾಣೆಗೆ ಒಬ್ಬರು ಕಲ್ಯಾಣಾಧಿಕಾರಿ’

‘ಪ್ರತಿ ಠಾಣೆಗೆ ಒಬ್ಬರು ಕಲ್ಯಾಣಾಧಿಕಾರಿಯನ್ನು ನಿಯೋಜಿಸಲಾಗಿದೆ. ಕಮಿಷನರ್ ಕಚೇರಿಯಲ್ಲಿ ಡಿಸಿಪಿ ಹರಿರಾಂ ಶಂಕರ್ ಈ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಪೊಲೀಸರಿಗೆ ಕೋವಿಡ್ ದೃಢಪಟ್ಟಲ್ಲಿ ವಿಶೇಷ ಮುತುವರ್ಜಿ ವಹಿಸಿ ಅವರನ್ನು ಆಸ್ಪತ್ರೆಗೆ ಸೇರಿಸುವ ಜತೆಗೆ ಚಿಕಿತ್ಸೆ, ನಿರಂತರ ನಿಗಾ ಬಗ್ಗೆ ಕಾಳಜಿ ವಹಿಸಲಾಗುತ್ತದೆ. ಆ ಮೂಲಕ ಅವರಲ್ಲಿ ರೋಗಿಗಳು ಹಾಗೂ ಇನ್ನಿತರ ಕರ್ತವ್ಯನಿರತ ಪೊಲೀಸರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತಿದೆ’ ಎನ್ನುತ್ತಾರೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.