ಮಂಗಳೂರು: ಹವಾಮಾನ ಇಲಾಖೆಯು ಮೇ ಕೊನೆಯ ವಾರದಲ್ಲಿ ಮುಂಗಾರು ಆರಂಭವಾಗುವ ಸೂಚನೆ ನೀಡಿದೆ. ಮುಂಗಾರಿನ ಸಂಭಾವ್ಯ ಅನಾಹುತಗಳನ್ನು ಎದುರಿಸಲು ಮೆಸ್ಕಾಂ ಸಿದ್ಧತೆ ನಡೆಸುತ್ತಿದೆ.
ತುರ್ತು ನಿರ್ವಹಣೆ, ಅಗತ್ಯ ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಈ ನಾಲ್ಕು ಜಿಲ್ಲೆಗಳ 14 ವಿಭಾಗಗಳಲ್ಲಿ ಒಟ್ಟು 489 ಮಂದಿಯ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಒಟ್ಟು 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿ ಅತ್ತಾವರ, ಕಾವೂರು, ಪುತ್ತೂರು, ಬಂಟ್ವಾಳ ಸೇರಿ 146 ಮಂದಿಯ ಕಾರ್ಯಪಡೆ ರಚಿಸಲಾಗಿದ್ದು, 29 ವಾಹನಗಳನ್ನು ಅಣಿಯಾಗಿ ಇಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ –55 ಮಂದಿಯ ಕಾರ್ಯಪಡೆ ಮತ್ತು 5 ವಾಹನಗಳು, ಕಾರ್ಕಳ– 24 ಮಂದಿಯ ಕಾರ್ಯಪಡೆ ಮತ್ತು 4 ವಾಹನಗಳು, ಕುಂದಾಪುರ– 48 ಮಂದಿಯ ಕಾರ್ಯಪಡೆ ಸಜ್ಜುಗೊಳಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ– 33 ಮಂದಿಯ ಕಾರ್ಯಪಡೆ ಮತ್ತು ಒಂದು ವಾಹನ, ಶಿಕಾರಿಪುರ– 24 ಮಂದಿಯ ಕಾರ್ಯಪಡೆ ಮತ್ತು 3 ವಾಹನ, ಭದ್ರಾವತಿ 10 ಮಂದಿಯ ಕಾರ್ಯಪಡೆ, ಸಾಗರ– 34 ಮಂದಿಯ ಕಾರ್ಯಪಡೆ ಮತ್ತು 6 ವಾಹನ ಅಣಿಗೊಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿಕ್ಕಮಗಳೂರು– 40 ಮಂದಿಯ ಕಾರ್ಯಪಡೆ ಮತ್ತು ನಾಲ್ಕು ವಾಹನಗಳು, ಕೊಪ್ಪ– 41 ಮಂದಿಯ ಕಾರ್ಯಪಡೆ ಮತ್ತು ಮೂರು ವಾಹನಗಳು, ಕಡೂರು– 34 ಮಂದಿಯ ಕಾರ್ಯಪಡೆ ಹಾಗೂ 7 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಮರ ಅಥವಾ ಮರದ ಕೊಂಬೆಗಳು ಬಿದ್ದು, ವಿದ್ಯುತ್ ಪೂರೈಕೆಗೆ ವ್ಯತ್ಯಯ ಆಗದಂತೆ ಎಚ್ಚರವಹಿಸಲು ಏಪ್ರಿಲ್ ತಿಂಗಳಿನಿಂದಲೇ ಅಪಾಯಕಾರಿ ಮರಗಳು, ಕೊಂಬೆ ಕತ್ತರಿಸುವ ಕೆಲಸ ಪ್ರಾರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾವೂರು, ಮಂಗಳೂರು, ಬಂಟ್ವಾಳ, ಪುತ್ತೂರು ವಿಭಾಗಗಳಲ್ಲಿ ಈ ಕಾರ್ಯ ಬಹುತೇಕ ಮುಕ್ತಾಯ ಹಂತದಲ್ಲಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ 462ರಷ್ಟು ವಿದ್ಯುತ್ ಕಂಬಗಳನ್ನು ಸರಿಪಡಿಸಲಾಗಿದೆ. 2,600ಕ್ಕೂ ಹೆಚ್ಚು ವಿದ್ಯುತ್ ವಿತರಕಗಳ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ಕಾರ್ಯಗಳ ಪರಿಶೀಲನೆಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಪ್ರತಿದಿನ ನಡೆಸಿರುವ ಕಾಮಗಾರಿಯ ಜಿಯೊ ಟ್ಯಾಗ್ಡ್ ಚಿತ್ರವನ್ನು ತೆಗೆದು ಕಳುಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಇವುಗಳ ಮಾಹಿತಿಯನ್ನು ಪ್ರತಿದಿನ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಕಾಮಗಾರಿಗಳು ಶೇ 80ರಷ್ಟು ಪೂರ್ಣಗೊಂಡಿವೆ ಎಂದು ಅವರು ತಿಳಿಸಿದರು.
ಗ್ರಾಹಕರು ಮೆಸ್ಕಾಂ ಸಹಾಯವಾಣಿ 1912, ತುರ್ತು ಸಂದರ್ಭದಲ್ಲಿ ಮೊಬೈಲ್ ಫೋನ್ ಸಂಖ್ಯೆ 8277883388 ಅಥವಾ 0824– 2950953 ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.