ADVERTISEMENT

ಆರಾಧನೆಯಿಂದ ಸಂತೃಪ್ತ ಜೀವನ: ಗುರುದೇವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 7:49 IST
Last Updated 29 ಜನವರಿ 2026, 7:49 IST
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು 
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು    

ವಿಟ್ಲ: ಆರಾಧನೆ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಕಾಣಲು ಸಾಧ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ರಥೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಸಂದೇಶ ನೀಡಿದರು.

ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ. ಧರ್ಮದ ಬಗ್ಗೆ ಮನೆಯಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ. ಜೀವನರಥ ಎಳೆಯುವುದು ಸುಲಭವಲ್ಲ ‌ಅದಕ್ಕೆ ದೈವೀಕೃಪೆ ಬೇಕು ಎಂದರು.

ADVERTISEMENT

ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿ, ಆರಾಧನೆ ಮಾಡಿ ದೇವ ಋಣ, ಸೇವೆ ಮಾಡಿ ಋಷಿ ಋಣ , ಪಿತೃ ಋಣ ಸಂದಾಯ ಮಾಡಿ ಋಣ ತ್ರಯ ಪೂರೈಸಿದಾಗ ಜೀವನ ಸಾರ್ಥಕ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ದೇವರ ನಾಮ ಸಂಕೀರ್ತನೆ ಹಾಡಿದರು.

ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಒಡೆಯನ ಊರು ಒಡಿಯೂರು ಎಂಬಂತೆ ದೀನರ ಕಣ್ಣೀರು ಒರೆಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಒಡಿಯೂರು ಸ್ವಾಮೀಜಿ ಮಾಡಿದ್ದಾರೆ. ಈ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಗುರುಗಳ ಸೇವೆ ಮೂಲಕ ಸಮಾಜ ಸೇವೆಯಲ್ಲಿ ಕೈಜೋಡಿಸೋಣ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಉದ್ಯಮಿಗಳಾದ ಡಾ.ಪಿ.ವಿ.ಶೆಟ್ಟಿ, ಶಶಿಶಿಧರ ಬಿ.ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ,‌ ರವಿನಾಥ ವಿ. ಶೆಟ್ಟಿ ಅಂಕಲೇಶ್ವರ, ಸಾಹಿತಿ ಡಾ.ಮುರಳೀಮೋಹನ ಚೂಂತಾರು, ಎರ್ಮಾಳು ಬಡಾ ವಿದ್ಯಾ ಪ್ರಭೋಧಿನಿ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನ ಅಧ್ಯಕ್ಷರೂ ಆಗಿರುವ ನವಿಮುಂಬೈ ನಗರಪಾಲಿಕೆ ಸದಸ್ಯ ಸುರೇಶ್ ಜಿ.ಶೆಟ್ಟಿ, ಅಂತರರಾಷ್ಟ್ರೀಯ ತುಳುವ ಮಹಾಸಭೆಯ ಮುಂಬೈನ ಪ್ರಧಾನ ಸಂಚಾಲಕ ಮೋರ್ಲ ರತ್ನಾಕರ ಶೆಟ್ಟಿ, ರವಿನಾಥ್ ವಿ.ಶೆಟ್ಟಿ ಅಂಕಲೇಶ್ವರ, ಕೊಲ್ಲಂನ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಜಿತ್‌ಕುಮಾರ್ ಪಂದಳಮ್, ಪಟ್ಲ ಯಕ್ಷಧ್ರುವ ಫೌಂಡೇಶಶ್‌ನ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ವಿಶೇಷ ಆಹ್ವಾನಿತರಾಗಿದ್ದರು.

ಅಪೇಕ್ಷಿತರಿಗೆ ಆರ್ಥಿಕ ನೆರವು: ಆರೋಗ್ಯ, ಶಿಕ್ಷಣ, ಮನೆ ನಿರ್ಮಾಣ, ಗೋಶಾಲೆಗಳು, ಭಜನಾ ಮಂಡಳಿಗಳು, ಶಾಲೆಗಳು, ರುದ್ರಭೂಮಿ ಒಳಗೊಂಡಂತೆ
135 ಮಂದಿಗೆ ₹12.77 ಲಕ್ಷಕ್ಕೂ ಅಧಿಕ ನೆರವು ವಿತರಿಸಲಾಯಿತು. ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಒಡಿಯೂರು ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಪ್ರಕಾಶ ಕೆ.‌ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿ ವಂದಿಸಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು .

ಸಭಾ ಕಾರ್ಯಕ್ರಮದ ಮೊದಲು ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ದತ್ತಾಂಜನೇಯ ದೇವರಿಗೆ ಗುರುದೇವಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಬ್ರಹ್ಮಕಲಶಾಭಿಷೇಕ ಜರುಗಿತು. ಬಳಿಕ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ, ಸಾರ್ವಜನಿಕ  ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದ ಅನಂತರ ಆಗಮ ಪೆರ್ಲ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.