ADVERTISEMENT

ವಿಟ್ಲ | ಬದುಕಿನ ಸಮತೋಲನದ ದಾರಿಯೇ ಅಧ್ಯಾತ್ಮ: ಗುರುದೇವಾನಂದ ಸ್ವಾಮೀಜಿ

ಒಡಿಯೂರಿನಲ್ಲಿ ‘ಶರದೃತು ಸಂಸ್ಕಾರ ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 6:33 IST
Last Updated 24 ಸೆಪ್ಟೆಂಬರ್ 2025, 6:33 IST
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ನಡೆದ ಶರದೃತು ಸಂಸ್ಕಾರ ಶಿಬಿರವನ್ನು ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು 
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ನಡೆದ ಶರದೃತು ಸಂಸ್ಕಾರ ಶಿಬಿರವನ್ನು ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು    

ವಿಟ್ಲ: ಮನುಷ್ಯರು ಪ್ರಕೃತಿಯ ಜತೆಗೆ ಸಾಗಬೇಕಾದ ಅನಿವಾರ್ಯತೆ ಇದೆ. ಸಂಸ್ಕಾರ ನಮ್ಮಲ್ಲಿದ್ದರೆ ಸುಸಂಸ್ಕೃತಭರಿತರಾಗಬಹುದು. ಬದುಕು ಕನ್ನಡಿಯಿದ್ದಂತೆ. ಸುಖ-ದುಃಖದಿಂದ ಕೂಡಿದ ಬದುಕನ್ನು ಸಮತೋಲನದಲ್ಲಿಡುವ ದಾರಿಯೇ ಅಧ್ಯಾತ್ಮಿಕತೆ. ಯೋಗದಲ್ಲಿ ಆರೋಗ್ಯ ಅಡಗಿದೆ ಎಂದು  ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಸಂಸ್ಥಾನದಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಒಡಿಯೂರು ಗುರುದೇವ ವಿದ್ಯಾಪೀಠವು ಮಂಗಳವಾರ ಆಯೋಜಿಸಿದ್ದ ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಶರದೃತುವಿನಲ್ಲಿ ಪರಿಶುದ್ಧ ವಾತಾವರಣವನ್ನು ಕಾಣಬಹುದು. ನಮ್ಮ ಮನಸ್ಸು ಪರಿಶುದ್ಧವಾಗಿರಬೇಕು. ಪ್ರಪಂಚವು ಪಂಚಭೂತಗಳಿಂದ ಕೂಡಿದೆ. ವಿಶಾಲವಾದ ಆಕಾಶ, ತಾಳ್ಮೆಯ ಭೂಮಿ, ಕೆಟ್ಟದನ್ನು ಸುಡುವ ಅಗ್ನಿ, ವ್ಯಾಪಕವಾದ ಗಾಳಿ, ನಿರಂತರ ಹರಿಯುವ ನೀರು ಎಂದಿಗೂ ತನ್ನ ಧರ್ಮವನ್ನು ಮರೆಯುವುದಿಲ್ಲ ಎಂದರು.

ADVERTISEMENT

ಸಾಧ್ವಿ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ಸೇಂಟ್ ಆಗ್ನೇಸ್ ಶಾಲೆಯ ಶಿಕ್ಷಕ ನವೀನ್ ಅಡ್ಯಾರು, ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿ ಪದ್ಮಾ, ಶಾಲಾ ನಾಯಕಿ ನಿಶಾ, ನಾಯಕ ರಕ್ಷಿತ್ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ರೇಣುಕಾ ಎಸ್.ರೈ ಶಿಬಿರಗೀತೆ ಹಾಡಿದರು. ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿಯರು ಯೋಗಾಭ್ಯಾಸ ಮಾಡಿಸಿದರು. ಶಿಕ್ಷಕಿ ಹೇಮಾವತಿ ವಂದಿಸಿ, ಶಿಕ್ಷಕಿ ಅನಿತಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.