ADVERTISEMENT

ಗ್ರಂಥಾಲಯ ಕ್ರಾಂತಿಗೆ ನಾಂದಿ ಹಾಡಿದ ರಂಗನಾಥನ್: ಪ್ರೊ. ವಿ.ಜಿ. ತಳವಾರ್‌

ವಿವಿ ಕಾಲೇಜು: ಡಾ. ಎಸ್‌.ಆರ್‌.ರಂಗನಾಥನ್‌ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 22:45 IST
Last Updated 12 ಆಗಸ್ಟ್ 2022, 22:45 IST
ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ವಿ.ಜಿ. ತಳವಾರ್‌ ಮಾತನಾಡಿದರು.
ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ವಿ.ಜಿ. ತಳವಾರ್‌ ಮಾತನಾಡಿದರು.   

ಮಂಗಳೂರು: ‘ಗಣಿತ ಪ್ರಾಧ್ಯಾಪಕರಾಗಿದ್ದ ಡಾ. ಎಸ್‌.ಆರ್‌. ರಂಗನಾಥನ್‌, ಭಾರತದ ಗ್ರಂಥಾಲಯಗಳನ್ನು ಬದಲಿಸಬೇಕೆಂದು ಪಣತೊಟ್ಟು 20 ವರ್ಷಗಳ ಕಾಲ ರಜೆಯಿಲ್ಲದೆ, ವಾರದ ಏಳೂ ದಿನ, ದಿನಕ್ಕೆ 13 ಗಂಟೆ ದುಡಿದು, ಗ್ರಂಥಾಲಯ ವಿಜ್ಞಾನದ ಪಿತಾಮಹ ಎನಿಸಿಕೊಂಡಿದ್ದು ಕಡಿಮೆ ಸಾಧನೆಯಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ವಿ.ಜಿ. ತಳವಾರ್‌ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಕಾಲೇಜು ಗ್ರಂಥಾಲಯ ಹಾಗೂ ಐಕ್ಯೂಎಸಿ ವತಿಯಿಂದ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಹಾಗೂ ಡಾ. ಎಸ್‌. ಆರ್‌. ರಂಗನಾಥನ್‌ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯ ವಿಭಜನೆಯಲ್ಲಿ ರಂಗನಾಥನ್‌ ಪರಿಚಯಿಸಿದ ಹೊಸ ಪದ್ಧತಿಗಳು ಅವರ ದೊಡ್ಡ ಕೊಡುಗೆ. ಬರಹಗಾರರ ಪರಿಚಯ, ಪ್ರತಿಯೊಬ್ಬ ಓದುಗನಿಗೂ ಪುಸ್ತಕ ದೊರೆಯುವಂತೆ ನೋಡಿಕೊಳ್ಳುವುದು, ಪ್ರತಿ ಪುಸ್ತಕಕ್ಕೂ ಓದುಗನಿರುವಂತೆ ಮಾಡುವುದು, ಓದುಗನ ಸಮಯ ಉಳಿಕೆ ಹಾಗೂ ಗ್ರಂಥಾಲಯವನ್ನು ಬೆಳೆಸುವುದು ಎಂಬ ಅವರ ಸೂತ್ರಗಳು ಹೊಸ ಕ್ರಾಂತಿಗೆ ಕಾರಣವಾದವು ಎಂದರು.

ಪ್ರಾಂಶುಪಾಲೆ ಡಾ. ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು. ಕೇರಳದ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಶಚೀಂದ್ರನ್‌ ವಿ. ಅವರು ‘ರಿಸರ್ಚ್‌ ಪಬ್ಲಿಕೇಶನ್‌ ಆಂಡ್‌ ಎಥಿಕ್ಸ್‌’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ADVERTISEMENT

ಕಾಲೇಜಿನ ಗ್ರಂಥಪಾಲಕಿ ಡಾ. ವನಜಾ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಡಾ. ಸುರೇಶ್‌ ವಂದಿಸಿದರು. ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಚೇರಿ ಸಿಬ್ಬಂದಿ ಹಾಗೂ ಗ್ರಂಥಾಲಯ ಸಿಬ್ಬಂದಿಗೆ ಸಾಂಕೇತಿಕವಾಗಿ ತ್ರಿವರ್ಣ ಧ್ವಜ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.