ಪುತ್ತೂರು (ದಕ್ಷಿಣ ಕನ್ನಡ): ಕಾಲೇಜಿಗೆ ತೆರಳುತ್ತಿದ್ದ ಪ್ರಥಮ ಪಿ.ಯು ವಿದ್ಯಾರ್ಥಿನಿ ಕೈಗೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ಆರೋಪವನ್ನು ಪುಷ್ಟೀಕರಿಸುವ ಸಾಕ್ಷ್ಯ ಲಭ್ಯವಾಗಿಲ್ಲ ಎಂಬ ಕಾರಣಕ್ಕೆ, ಕಾನೂನಿನ ಸಂಘರ್ಷಕ್ಕೆ ಸಿಲುಕಿದ ವಿದ್ಯಾರ್ಥಿಯನ್ನು ಪೊಲೀಸರು ಮಂಗಳವಾರ ರಾತ್ರಿಯೇ ಬಿಟ್ಟು ಕಳುಹಿಸಿದ್ದಾರೆ.
‘ಹಿಂದೂ ಸಮುದಾಯದ ವಿದ್ಯಾರ್ಥಿಯೊಬ್ಬ ಹಿಂಬಾಲಿಸಿಕೊಂಡು ಬಂದು ಪ್ರೇಮ ನಿವೇದನೆ ಮಾಡಿದ್ದ. ಆತನ ಕೋರಿಕೆ ನಿರಾಕರಿಸಿದ್ದಕ್ಕೆ ಕೋಪಗೊಂಡು ಹರಿತ ಆಯುಧದಿಂದ ಕೈಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ’ ಎಂದು ಅಪ್ರಾಪ್ತ ವಯಸ್ಸಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ್ದಳು. ಈ ಸಂಬಂಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
‘ನಗರದ ವಿವಿಧ ಕಡೆಗಳಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿನಿ ಮಾಡಿರುವ ಆರೋಪವನ್ನು ಪುಷ್ಟೀಕರಿಸುವ ಸಾಕ್ಷ್ಯಗಳು ಲಭ್ಯವಾಗಿಲ್ಲ. ವಿಚಾರಣೆ ನಡೆಸಿದ ಬಳಿಕ ಬಾಲಕನನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ಬೇರೆ ಬೇರೆ ಆಯಾಮಗಳಿಂದ ಪರಿಶೀಲಿಸಲಾಗುತ್ತಿದೆ. ಸತ್ಯಸಂಗತಿ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.