
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ಹಾಗೂ ಪೇಜಾವರ ಮಠಾಧೀಶರ ಎಂಟನೆಯ ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವವು ಮಠಾಧೀಶ ಶ್ರೀವಿದ್ಯಾಪ್ರಸನ್ನತೀರ್ಥರ ಹಾಗೂ ಶ್ರೀಚಿತ್ರಾಪುರ ಮಠಾಧೀಶ ಶ್ರೀವಿದ್ಯೆಂದ್ರ ತೀರ್ಥರ ಸಾನ್ನಿಧ್ಯದಲ್ಲಿ ವೈಭವದಿಂದ ನೆರವೇರಿತು.
ಆರಂಭದಲ್ಲಿ ಇಬ್ಬರು ವಿದ್ಯಾರ್ಥಿಗಳು ಸುಧಾನುವಾದ ಮಾಡಿದರು.
ನಂತರ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥರು, ಶ್ರೀಮನ್ನ್ಯಾಯಸುಧೆಯ ಒಂದೂವರೆ ಗಂಟೆಗಳ ಕಾಲ ಅನುವಾದ ನಡೆಸಿ ವಾಕ್ಯಾರ್ಥ ಗೋಷ್ಠಿಗಳ ಔಚಿತ್ಯಗಳನ್ನು ತಿಳಿಸಿದರು. ಸಭಾಂಗಣದ ಹೊರಗೂ ಜನರು ನಿಂತು ಶ್ರೀಪಾದರ ಸಂದೇಶ ಆಲಿಸಿದರು. ಸುಮಾರು 3000ಕ್ಕೂ ಹೆಚ್ಚಿನ ಜನರು ರಾಜ್ಯದ ವಿವಿಧೆಡೆ ಹಾಗೂ ಇತರೆ ರಾಜ್ಯಗಳಿಂದ ಮಹೋತ್ಸವಕ್ಕೆ ಬಂದಿದ್ದರು.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 12 ವರ್ಷಗಳ ಕಾಲ ವೇದ ವೇದಾಂತದಿಗಳ ಅಧ್ಯಯನ ನಡೆಸಿ ಎರಡು ವರ್ಷ ಶ್ರೀ ಪೇಜಾವರ ಶ್ರೀಗಳೊಂದಿಗೆ ಸಂಚಾರದಲ್ಲೂ ಪಾಲ್ಗೊಳ್ಳುತ್ತಾ ಅವರಿಂದ ಶ್ರೀಮದ್ಬ್ರಹ್ಮಸೂತ್ರ- ಅನುವ್ಯಾಖ್ಯಾನ - ಶ್ರೀಮನ್ಯಾಯಸುಧೆಯ ಪಾಠ ಕೇಳಿದ 31 ಯುವ ವಿದ್ವಾಂಸರಿಗೆ ಶ್ರೀಮನ್ನ್ಯಾಯ ಸುಧಾಮಂಗಳ ಮಹೋತ್ಸವವು ನೆರವೇರಿತು.
ಪೇಜಾವರ ಶ್ರೀಪಾದರು ಶಾಲು ಹೊದಿಸಿ ಬೆಳ್ಳಿಯ ತಂಬಿಗೆ, ಬೆಳ್ಳಿಯ ತುಳಸಿಮಣಿ, ಬಂಗಾರದ ಪದಕ, ಸಂಭಾವನೆಯನ್ನಿತ್ತು ಸನ್ಮಾನಿಸಿದರು. ಸುಬ್ರಹ್ಮಣ್ಯ ಮಠಾಧೀಶರು ಸಹ ಬೆಳ್ಳಿಯ ಲೋಟ, ಬೆಳ್ಳಿಯ ತುಳಸಿ ಮಣಿಗಳನ್ನಿತ್ತು ನೂತನ ಸುಧಾ ವಿದ್ವಾಂಸರನ್ನು ಸನ್ಮಾನಿಸಿದರು.
ಸುಬ್ರಹ್ಮಣ್ಯ ಮಠವು ನಾಲ್ಕು ದಿನಗಳ ಕಾಲ ರಾಷ್ಟ್ರೀಯ ವಿದ್ವತ್ ಸಮ್ಮೇಳನ, ಶ್ರೀಮದ್ಬ್ರಹ್ಮಸೂತ್ರಾನು ವ್ಯಾಖ್ಯಾನ ನ್ಯಾಯಸುಧಾ ಮಂಗಳ ಮಹೋತ್ಸವವನ್ನು ವೈಭವ ಪೂರ್ಣವಾಗಿ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.