ADVERTISEMENT

ಪ್ಲಾಸ್ಟಿಕ್ ಹಾವಳಿ: ಶ್ವಾನದ ಮುಖಕ್ಕೆ ಬಾಟಲಿ

ಐದಾರು ದಿನದಿಂದ ಆಹಾರವಿಲ್ಲದೆ ಪರಿತಪಿಸುತ್ತಿರುವ ನಾಯಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2024, 8:01 IST
Last Updated 9 ಏಪ್ರಿಲ್ 2024, 8:01 IST
ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಸಿಲುಕಿಸಿಕೊಂಡಿರುವ ನಾಯಿಯನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದರು
ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಸಿಲುಕಿಸಿಕೊಂಡಿರುವ ನಾಯಿಯನ್ನು ಹಿಡಿಯಲು ಸ್ಥಳೀಯರು ಪ್ರಯತ್ನಿಸಿದರು   

ಮುಡಿಪು: ತಿಂಡಿಯ ಆಸೆಯಲ್ಲಿ ಮೂಲೆಯೊಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಡಬ್ಬವೊಂದಕ್ಕೆ ತಲೆ‌ ಹಾಕಿದ್ದ ಶ್ವಾನವೊಂದು, ಆ ಬಾಟಲಿಯನ್ನು ಮುಖಕ್ಕೆ ಅಂಟಿಸಿಕೊಂಡು, ಅನ್ನ– ಆಹಾರವಿಲ್ಲದೆ ವೇದನೆ ಅನುಭವಿಸುತ್ತಿದೆ. 

ಮುಡಿಪು ಜಂಕ್ಷನ್ ಸಮೀಪ ಸುಮಾರು ಐದಾರು ದಿನಗಳಿಂದ ತಲೆಗೆ ಡಬ್ಬ ತುರುಕಿದ ರೀತಿಯಲ್ಲಿ ನಾಯಿಯೊಂದು ಅಡ್ಡಾಡುತ್ತಿದೆ. ಕುತ್ತಿಗೆಯ ಭಾಗಕ್ಕೆ ಡಬ್ಬ ಬಿಗಿಯಾಗಿ ಹಿಡಿದಿರುವುದರಿಂದ ಅದರಿಂದ ಮುಖವನ್ನು ಹೊರಗೆ ತೆಗೆಯಲು ಆಗದೆ ನಾಯಿ ಸಂಕಟಪಡುತ್ತಿದೆ.

ಪ್ಲಾಸ್ಟಿಕ್ ಡಬ್ಬ ಆಗಿರುವುದರಿಂದ ನಾಯಿಗೆ ಓಡಾಡಲು ಸಮಸ್ಯೆ ಇಲ್ಲ. ಆದರೆ, ಆಹಾರ ತಿನ್ನಲು ಆಗುತ್ತಿಲ್ಲ. ನಾಯಿಯ ಮೂಕ ವೇದನೆ ಕಂಡು ಸ್ಥಳೀಯ ಕೆಲವರು, ಡಬ್ಬವನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ, ನಾಯಿ ತಪ್ಪಿಸಿಕೊಂಡು ಓಡಿದ್ದರಿಂದ ಇದು ಸಾಧ್ಯವಾಗಿಲ್ಲ.

ADVERTISEMENT

ಕೆಲ ವರ್ಷಗಳ ಹಿಂದೆ ಕೊಣಾಜೆಯ ಮಂಗಳೂರು ವಿವಿ ಬಳಿ ಇದೇ ರೀತಿ ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಅಂಟಿಕೊಂಡು ನಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸಿತ್ತು. ಸ್ಥಳೀಯರು ಮೂರು ದಿನ ಕಾರ್ಯಾಚರಣೆ ನಡೆಸಿ ನಾಯಿಯನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದರು.

‘ತಲೆ ಡಬ್ಬ ಸಿಲುಕಿಕೊಂಡಿದ್ದ ನಾಯಿ ದಾಹದಿಂದ ಚರಂಡಿ ನೀರು ಕುಡಿಯಲು ಪ್ರಯತ್ನಿಸುತ್ತಿತ್ತು. ಅದನ್ನು ಕಂಡು ನಾವು ನಾಯಿಯನ್ನು ಹಿಡಿದು, ಡಬ್ಬ ತೆಗೆಯಲು ಪ್ರಯತ್ನಿಸಿದೆವು. ಅದು ತಪ್ಪಿಸಿಕೊಂಡು ಓಡಾಡುತ್ತಿದೆ. ನೀರು, ಆಹಾರವಿಲ್ಲದೆ ಸಾಯುವ ಮುನ್ನ ಅದನ್ನು ರಕ್ಷಿಸಬೇಕಿದೆ ಎಂದು ಕೊಣಾಜೆ ವಿಜಯ್ ಹೇಳಿದರು.

ಬೇಸಿಗೆಯ ದಗೆಗೆ ಅಹಾರವಿಲ್ಲದೆ ಸುಸ್ತಾಗಿರುವ ಶ್ವಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.