ಮೂಡುಬಿದಿರೆ: ನಾಲ್ಕನೇ ಪರ್ಯಾಯ ಮಹೋತ್ಸವದ ಅಂಗವಾಗಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಶಿಷ್ಯ ಸುಶ್ರೀಂದ್ರತೀರ್ಥ ಸ್ವಾಮೀಜಿ ಜತೆಗೆ ಇಲ್ಲಿನ ಎಂಸಿಎಸ್ ಸೊಸೈಟಿಗೆ ಗುರುವಾರ ಭೇಟಿ ನೀಡಿದರು.
ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸ್ವಾಮೀಜಿಯನ್ನು ಗೌರವಿಸಿದರು.
ವ್ಯಕ್ತಿ ಎತ್ತರಕ್ಕೆ ಬೆಳೆದಂತೆ ಆತನ ವಯಸ್ಸು ಹೆಚ್ಚುತ್ತಾ ಹೋಗುತ್ತದೆ. ಆದರೆ, ಒಂದು ಸಂಸ್ಥೆ ಎತ್ತರಕ್ಕೆ ಬೆಳೆದೆರೆ ಅದು ಸದೃಢತೆಯ ಸಂಕೇತ. ಶತಮಾನದ ಇತಿಹಾಸ ಹೊಂದಿರುವ ಎಂಸಿಎಸ್ ಸೊಸೈಟಿ ಇಷ್ಟು ಎತ್ತರಕ್ಕೆ ಬೆಳೆಯಲು ಗ್ರಾಹಕರು ಉಳಿಸಿಕೊಂಡು ಬಂದಿರುವ ನಂಬಿಕೆಯೆ ಕಾರಣ ಎಂದರು.
ಪರ್ಯಾಯದ ಪಂಚ ಮಹಾಯೋಜನೆಯಲ್ಲಿ ಪ್ರಧಾನವಾಗಿರುವ ಕೋಟಿ ಗೀತಾ ಲೇಖನ ಯಜ್ಞದ ಅಂಗವಾಗಿ ಪ್ರತಿಯೊಬ್ಬರ ಮನೆ, ಮನಕ್ಕೂ ಭಗವದ್ಗೀತೆಯ ಸಂದೇಶ ತಲುಪಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಇದರಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಎಂಸಿಎಸ್ ಸೋಸೈಟಿ ಪರವಾಗಿ ಅಧ್ಯಕ್ಷರಿಗೆ ಹಾಗೂ ಪ್ರಮುಖರಿಗೆ ಪರ್ಯಾಯ ಮಹೋತ್ಸವದ ಅಮಂತ್ರಣ ಪತ್ರಿಕೆಯನ್ನು ಸ್ವಾಮೀಜಿ ನೀಡಿದರು.
ಸೊಸೈಟಿಯ ಭದ್ರತಾ ಕೋಶಕ್ಕೆ ಅಕ್ಷತಾರ್ಪಣೆ ಮಾಡಿದರು. ಬೆಳ್ಳಿಯ ಹರಿವಾಣ ಮತ್ತು ಕಲಶದಲ್ಲಿ ನಾಣ್ಯವನ್ನು ತುಂಬಿ ಸ್ವಾಮೀಜಿಗೆ ಸಮರ್ಪಿಸಲಾಯಿತು. ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಸಿಇಒ ಧರಣೇಂದ್ರ ಜೈನ್, ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು.
ಉದ್ಯಮಿ ಶ್ರೀಪತಿ ಭಟ್ ಅವರ ನಿವಾಸದಲ್ಲಿ ಸ್ವಾಮೀಜಿಗೆ ನಾಣ್ಯದ ತುಲಾಭಾರ ನಡೆಯಿತು. ರಂಗ ನಿರ್ದೇಶಕ ಕೆ.ವಿ.ರಮಣ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.