ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು
ಉಜಿರೆ: ಇದೇ 18ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶ್ರೀಂದ್ರತೀರ್ಥ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.
ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆಶೀರ್ವಚನ ನೀಡಿದರು.
ಕ್ಷೇತ್ರದ ಸಂಪ್ರದಾಯದಂತೆ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಿ ಸನ್ಮಾನಿಸಲಾಯಿತು.
ಆಶೀರ್ವಚನ ನೀಡಿದ ಸುಗುಣೇಂದ್ರತೀರ್ಥ ಸ್ವಾಮೀಜಿ, ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಧರ್ಮಸ್ಥಳದ ಭವ್ಯ ಪರಂಪರೆ ಮತ್ತು ಸಂಪ್ರದಾಯವನ್ನು ಉಳಿಸಲಾಗುತ್ತಿದೆ. ಇಲ್ಲಿನ ಆಚಾರ-ವಿಚಾರಗಳು, ನಂಬಿಕೆ-ನಡವಳಿಕೆಗಳು, ಶಿಸ್ತು, ಸ್ವಚ್ಛತೆ ಮತ್ತು ದಕ್ಷತೆ ಹಾಗೂ ಅನುಪಮ ಸೇವಾಕಾರ್ಯಗಳಿಂದಾಗಿ ಧರ್ಮಸ್ಥಳ ಎಲ್ಲ ತೀರ್ಥಕ್ಷೇತ್ರಗಳಿಗೂ ಮಾದರಿ ಕ್ಷೇತ್ರವಾಗಿದೆ. ವಿಶ್ವದೆಲ್ಲೆಡೆ ಬೆಳಗುತ್ತಿದೆ ಎಂದರು.
ಹೆಗ್ಗಡೆಯವರ ಸೇವೆ-ಸಾಧನೆ ಹಾಗೂ ಕಾರ್ಯವೈಖರಿ ಉಡುಪಿಗೂ ಆದರ್ಶ ಹಾಗೂ ಅನುಕರಣೀಯವಾಗಿದೆ. ಇದು ಸ್ಫೂರ್ತಿದಾಯಕವಾಗಿದೆ ಎಂದರು.
ಡಿ.ಹರ್ಷೇಂದ್ರ ಕುಮಾರ್ ಅವರ ಕಾರ್ಯದಕ್ಷತೆ ಹಾಗೂ ಸೇವಾವೈಖರಿಯನ್ನು ಸ್ವಾಮೀಜಿ ಶ್ಲಾಘಿಸಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.